ದಾವಣಗೆರೆ: ವಾಲ್ಮೀಕಿ ಸಮುದಾಯಕ್ಕೆ ನಮ್ಮ ಸರ್ಕಾರದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ಹೆಚ್ಚಳ ಮಾಡದಕ್ಕೆ ಸಮುದಾಯ ತಕ್ಕ ಪಾಠ ಕಲಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರು ಪೀಠದಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರ ಆದಷ್ಟು ಬೇಗ ಮೀಸಲಾತಿ ಹೆಚ್ಚಿಸಬೇಕು. ಆದರೆ, ಈ ಹಿಂದೆ ನಮ್ಮ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಜನರು ತಕ್ಕ ಪಾಠ ಕಲಿಸಿದ್ಧಾರೆ. ಹೀಗಾಗಿ ಈಗಿನ ಸರ್ಕಾರ ಆದಷ್ಟು ಬೇಗ ಮೀಸಲಾತಿ ಘೋಷಣೆ ಮಾಡಬೇಕು ಎಂದರು.
ಸಮಾಜ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ರಾಜ್ಯ ಸರ್ಕಾರದಲ್ಲಿ ಇಬ್ಬರು ಪವರ್ ಫುಲ್ ಲೀಡರ್ ಗಳು ಇದ್ದಾರೆ. ಒಬ್ಬರು ಶ್ರೀರಾಮುಲು ಅವರು. ಇನ್ನೊಬ್ಬರು ರಮೇಶ್ ಜಾರಕಿಹೊಳಿ. ಈ ಇಬ್ಬರ ಸಚಿವರ ಪವರ್ ಹೇಗೆ ಇದೆ ಅಂದ್ರೆ 100 ಎಂಜಿಯಷ್ಟಿದೆ. ಹೀಗಾಗಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು. ನಾವು ಯಾವುದೇ ಪಕ್ಷದಲ್ಲಿ ಇದ್ದರೂ, ಸಮಾಜ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ತಿಳಿಸಿದರು.