ತುಮಕೂರು: ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ನಡೆದ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿ ಸ್ಫೋಟ ದುರಂತ ಘಟನೆ ನೆನಪು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಸಂಪೂರ್ಣ ಧ್ವಂಸವಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುಮಕೂರಿನ ಹೊನ್ನುಡುಕೆ ಸಮೀಪ ಮಸ್ಕಲ್ ಗ್ರಾಮದಲ್ಲಿ ನಡೆದ ಸ್ಫೋಟದಲ್ಲಿ ಮನೆಯು ಸಂಪೂರ್ಣ ನಾಶವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಕ್ಷ್ಮಿಕಾಂತ್ ಎನ್ನುವವರಿಗೆ ಸೇರಿದ ಮನೆ ಇದಾಗಿದ್ದು ಸ್ಫೋಟದ ಪರಿಣಾಮ ಗೋಡೆಗಳು ಉರುಳಿದೆ. ಘಟನಾ ವೇಳೆ ಮನೆಯಲ್ಲಿದ್ದ ಲಕ್ಷ್ಮಿಕಾಂತ್ ಅವರ ಪತ್ನಿ ಸುವರ್ಣಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪತಿ ಲಕ್ಷ್ಮಿಕಾಂತ್ ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದ ವೇಳೆ ಘಟನೆ ನಡೆದಿದ್ದು ಭಾರೀ ಅನಾಹುತ ತಪ್ಪಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಲಕ್ಶ್ಮಿಕಾಂತ್ ಅವರು ಕಲ್ಲು ಬಂಡೆಗಳ ಸ್ಫೋಟ, ಮಣ್ಣು ಅಗೆತದಂತಹಾ ಕೆಲಸಕ್ಕೆ ನೆರವಾಗುತ್ತಿದ್ದರು. ಮಸ್ಕಲ್ ಗ್ರಾಮದ ಶಾಲೆಯ ಸಮೀಪ ಬಂಡೆಗಳ ಒಡೆಯಲು ಜಿಲೆಟಿನ್ ಕಡ್ಡಿಗಳನ್ನು ತರಿಸಿದ್ದು ಇದರಲ್ಲಿ ಉಳಿದವನ್ನು ಲಕ್ಷ್ಮಿಕಾಂತ್ ತಮ್ಮ ಅನೆಯಲ್ಲಿ ಇರಿಸಿಕೊಂಡಿದ್ದರೆಂದು ಹೇಳಲಾಗಿದೆ. ಸಧ್ಯ ಬಾಂಬ್ ನಿಷ್ಕ್ರಿಯ ದಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮನೆಯ ಸುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಜನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.



