ಡಿವಿಜಿ ಸುದ್ದಿ, ದಾವಣಗೆರೆ: ನಗರದ ಹೃದಯ ಭಾಗದಲ್ಲಿರುವ ರಾಮ್ ಅಂಡ್ ಕೋ ಸರ್ಕಲ್ ಬಳಿ ಉಂಟಾಗುವ ಟ್ರಾಫಿಕ್ ಜಾಮ್ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಮೇಯರ್ ಅಜಯ್ ಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಎಸ್ ಪಿ ಹನುಮಂತರಾಯ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಮೇಯರ್ ಅಜಯ್ ಕುಮಾರ್, ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಇಂಜಿನಿಯರ್ ಗಳು ಹಾಗೂ ಎಸ್ ಪಿ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇವೆ.
ರಾಮ್ ಅಂಡ್ ಕೋ ವೃತ್ತ ನಗರದ ಕೇಂದ್ರ ಬಿಂದು ಆಗಿರುವುದರಿಂದ ಇಲ್ಲಿ ದಿನ ನಿತ್ಯ ಸಾಕಷ್ಟು ಜನರ ಓಡಾಟ ಇರುತ್ತದೆ. ಆದರೆ, ಇಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ರಸ್ತೆಯನ್ನು ಒತ್ತುವರಿ ಮಾಡಿ ಫುಟ್ ಪಾತ್ ನಿರ್ಮಿಸಿದ್ಧಾರೆ. ಇದಲ್ಲದೆ ಸಾರ್ವಜನಿಕರು ಡಬಲ್ ಲೈನ್ ನಲ್ಲಿ ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಹೆಚ್ಚಾಗುತ್ತಿದೆ ಎಂದರು.
ಇಲ್ಲಿನ ಬೃಹತ್ ಮರಗಳು ಕೂಡ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ ಇಲ್ಲಿನ ಜನರ ವಿಶ್ವಾಸಕ್ಕೆ ತಗೆದುಕೊಂಡು ಹೆಚ್ಚುವರಿ ಫುಟ್ ಪಾತ್ ತೆರವುಗೊಳಿಸಲಾಗುವುದು. ಹಾಗೆಯೇ ಬೃಹತ್ ಮರಗಳನ್ನು ತೆರವುಗೊಳಿಸಲು ಎಲ್ಲರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಒಂದು ಮರ ತೆರವುಗೊಳಿಸಿದರೆ, ಬೇರೆ ಕಡೆ ನಾಲ್ಕೈದು ಸಸಿ ನೆಡಲು ವ್ಯವಸ್ಥೆ ಮಾಡಲಾಗುವುದು. ಇದರ ಜೊತೆಗೆ ಪಾಲಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಎಸ್ ಪಿ ಹನುಮಂತರಾಯ ಮಾತನಾಡಿ, ರಾಮ ಅಂಡ್ ಕೋ ಸರ್ಕಲ್ ನಲ್ಲಿ ಸಿಂಗಲ್ ಲೈನ್ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿದ್ದರೂ, ಡಬಲ್ ಲೈನ್ ನಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರ ಜೊತೆ ಆಟೋಗಳನ್ನು ಎಲ್ಲಿಂದರಲ್ಲಿ ನಿಲ್ಲಿಸಿಕೊಳ್ಳುವುದು. ಕಾರನಲ್ಲಿಯೇ ಕುಳಿತು ಆಹಾರ ಸೇವನೆ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಉಂಟಾಗುತ್ತಿದೆ ಎಂದು ದೂರುಗಳು ಬಂದಿವೆ. ಹೀಗಾಗಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಟ್ರಾಫಿಕ್ ನಿಯಂತ್ರಣ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.