ಅಂಕಣ
ಜನಮಾನಸದಲ್ಲಿ ನೆಲೆಗೊಂಡ ಅಪ್ರತಿಮ ದಿವ್ಯ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ
-ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ
ಸೂರ್ಯನ ಸುತ್ತ ಭೂಮಿ ತಿರುಗಿದರೆ ಭೂಮಿಯ ಸುತ್ತ ಚಂದ್ರ ತಿರುಗುವುದು ಪಾಕೃತಿಕ ನಿಯಮ.ಸೂರ್ಯ, ಚಂದ್ರ ಮತ್ತು ಭೂಮಿ ಸರಳರೇಖೆಯಲ್ಲಿ ಬಂದಾಗ ಗ್ರಹಣವಾಗುತ್ತದೆ. ಆದರೆ ಗ್ರಹಣ ಹಿಡಿದಂತೆ ತೋರುವುದು ಭೂಮಿಯ ಮೇಲೆ ಇರುವ ಜನರಿಗೇ ಹೊರತು ಸೂರ್ಯನಿಗಾಗಲೀ, ಚಂದ್ರನಿಗಾಗಲೀ ಅಲ್ಲ. ಅಂತಹ ಒಂದು ಸಂದರ್ಭ ಇಂದು ಬಂದೊದಗಿದೆಯೆಂದರೆ ನೀವು ಆಶ್ಚರ್ಯಚಕಿತರಾಗಬಹುದು. ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಕರಾದ ದಿನ ಒದಗಿ ಬಂದಿದೆ. ಹೀಗಾಗಿ ಯಾವ ಕಾಲಕ್ಕೂ ಗ್ರಹಣ ಹಿಡಿಯದ ಅವರ ಧೀಮಂತ ವ್ಯಕಿತ್ವದ ಚಿತ್ರಣ ಇಲ್ಲಿದೆ.
ಪರಮಪೂಜ್ಯ ಗುರುವರ್ಯರು ಧಾರ್ಮಿಕ, ಸಾಮಾಜಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕಳೆದ ಶತಮಾನದಲ್ಲಿ ಮಧ್ಯಕರ್ನಾಟಕದ ಜನಮನದಲ್ಲಿ ರಾರಾಜಿಸಿದವರು. 1914ರ ಬಸವಜಯಂತಿಯ ದಿನವೇ ಜನಿಸಿದ ಅವರ ನಡೆ, ನುಡಿ, ಆಚಾರ, ವಿಚಾರಗಳೆಲ್ಲವೂ ಬಸವಪ್ರಣೀತವೇ ಆಗಿದ್ದವು. ರಸ್ತೆ, ಶಾಲೆ, ವಿದ್ಯುತ್ತು ಏನೊಂದೂ ಇಲ್ಲದ ಕುಗ್ರಾಮವಾಗಿದ್ದ ಸಿರಿಗೆರೆ ಆಧುನಿಕತೆಯತ್ತ ಮುಖ ಮಾಡಲು ಶ್ರೀ ಗುರುವರ್ಯರೇ ಕಾರಣ. ಅವರ ಈ ಕಾರ್ಯದಲ್ಲಿ ಬಹಳ ಜನ ಕೈಜೋಡಿಸಿದರೂ
ಕೆಲವರು ಅಡ್ಡಗಾಲು ಹಾಕಿದರು. ಹೆಜ್ಜೆ ಹೆಜ್ಜೆಗೂ ವಿರೋಧವನ್ನು ಅವರು ಎದುರಿಸಬೇಕಾಯಿತು. ಮಗ್ಗುಲು ಮುಳ್ಳುಗಳಾದ ಅಂತರಂಗದ ವೈರಿಗಳು, ಉಗುರು ಹಲ್ಲುಗಳಿಂದ ಕೊಲ್ಲಲು ಸಜ್ಜಾದ ಬಹಿರಂಗದ ಶತ್ರುವ್ಯಾಘ್ರಗಳು, ಅಜ್ಞಾನ, ಅಂಧಕಾರದಲ್ಲಿದ್ದ ಜನರನ್ನು ಜಾತಿಭೇದವನ್ನಣಿಸದೆ ಅವರು ಮುನ್ನಡೆಸಿದರು. ಸ್ವಾತಂತ್ರ್ಯ ಪೂರ್ವದ ದಿನದಿಂದಲೇ ನೂರಾರು ಶಾಲಾ ಕಾಲೇಜುಗಳನ್ನು ಹಳ್ಳಿ ಹಳ್ಳಿಗಳಲ್ಲಿ ಸ್ತಾಪಿಸುತ್ತಾ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಮುಂದಾದರು. ಕಾಶಿಯಲ್ಲಿ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಅವರು ಅಲ್ಲಿಯ ‘ಅಮರಭಾರತೀ’ ಎಂಬ ಸಂಸ್ಕೃತ ಮಾಸಪತ್ರಿಕೆಯಲ್ಲಿ ಬರೆಯುತ್ತಿದ್ದ ಅವರ ಕಾವ್ಯರಚನೆಗಳನ್ನು ನೋಡಿ ಅವರ ವಿದ್ಯಾಗುರುಗಳಾದ ಗೌರೀನಾಥ ಪಾಠಕರು “ಗುರು ಗೂಡ ಹೈ. ಚೇಲಾ ಚೀನಿ!” (ಗುರುವು ಬೆಲ್ಲ ವಾದರೆ ಶಿಷ್ಯ ಸಕ್ಕರೆ) ಎಂದು ಪ್ರಶಂಸಿಸುತ್ತಿದ್ದರಂತೆ! ಕಾಳಿದಾಸನನ್ನು ಸರಿಗಟ್ಟಬಲ್ಲ ಅಪ್ರತಿಮ ಕಾವ್ಯಪತಿಭೆಯನ್ನು ಹೊಂದಿದ್ದ ಅವರು
ಮಠದ ಹೊಣೆಗಾರಿಕೆಯನ್ನು ಹೊತ್ತುಕೊಂಡ ಮೇಲೆ ಅವರ ಸಾಹಿತ್ಯಕೃಷಿ ಸೊರಗಿಹೋಯಿತು. ಆದರೆ ಅವರ ಬದುಕೇ ಒಂದು ಬರಹವಾಗಿ ಜನಮಾನಸದಲ್ಲಿ ನೆಲೆಗೊಂಡಿತು. ಆಕಸ್ಮಿಕವಾಗಿ ನಮ್ಮ ಕೈಗಳಿಗೆ ದೊರೆತ ಅವರ ದಿನಚರಿ ‘ಆತ್ಮನಿವೇದನೆ’ ಗುರುಗಳವರ ಅಂತರಂಗದ ಆಧ್ಯಾತ್ಮಿಕ ಸಾಧನೆಯ ಕಥನವಾದರೆ ‘ದಿಟ್ಟ ಹೆಜ್ಜೆ ಧೀರಕ್ರಮ’ ಅವರ ಬಹಿರಂಗ ಹೋರಾಟದ ಸಾಹಸಗಾಥೆ.
ಮಠದ ಭಕ್ತರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದ ಕಾಲವದು. ಮಠದ ಶಿಷ್ಯರು ಬಹುತೇಕ ಬಡವರೇ ಆಗಿದ್ದರು. ಬಹುತೇಕ ತಿರಸ್ಕಾರಕ್ಕೆ ಒಳಗಾದ ಮಠ ಸರ್ವರ ಆದರಣೀಯ ಮಠವಾಗಿದ್ದು ಅವರಿಂದ. ಅವರದು ಬಸವಣ್ಣನ ನಡೆ. ಜಾತಿಗೆ ಮಣೆ ಇಲ್ಲ, ನೀತಿಗೆ ಮಣೆ. ಹರಿಜನರ ದುಗ್ಗಪ್ಪನವರು ಬೆಳೆದಿದ್ದು, ಓದಿದ್ದು, ಶಾಸಕರಾಗಿದ್ದು ಗುರುಗಳವರ ಆಶೀರ್ವಾದದಿಂದ. ಹಾವನೂರು ವರದಿಯ
ನಂತರ ಮೀಸಲಾತಿ ಬಂದು ಹಿಂದುಳಿದವರಿಗೆ ಮೀಸಲಾತಿಯೇನೋ ದಕ್ಕಿತು. ಆದರೆ ಸಮಾಜದಲ್ಲಿ ಸಂಘರ್ಷ ಹೆಚ್ಚಿತು. ಅಂತಹ ಯಾವ ವರದಿಯೂ ಇಲ್ಲದ ಕಾಲದಲ್ಲಿ ಗುರುಗಳು ಹಿಂದುಳಿದವರ ಕಲ್ಯಾಣಕ್ಕೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡೇ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡರು. ಸಾಮೂಹಿಕ ವಿವಾಹಗಳು, ಅಂತರ್ಜಾತಿಯ ಮದುವೆಗಳಿಗೆ ಪ್ರೋತ್ಸಾಹ.
ಗುರುವರ್ಯರ ಈ ಕಾರ್ಯಕ್ರಮಗಳು ಅಂದಿನ ಕಾಲಕ್ಕೆ ಅತ್ಯಂತ ಕ್ರಾಂತಿಕಾರಿಯೇ ಆಗಿದ್ದವು. ಅಂತಾರಾಷ್ಟ್ರೀಯ ಖ್ಯಾತಿವೆತ್ತ ಸಮಾಜವಿಜ್ಞಾನಿ ಡಾ.ಹಿರೇಮಲ್ಲೂರು ಈಶ್ವರನ್ ಅವರ ಮದುವೆ ಮಾಡಿಸಿದವರು ಗುರುಗಳು. ಈಶ್ವರನ್ ಪ್ರೀತಿಸಿದ ಹಾಲೆಂಡಿನ ಕ್ರಿಶ್ಚಿಯನ್ ಮಹಿಳೆ ಓಬಿನ್ ಬಿ. ಸಿಟರ್ ಎಂಬುವವರಿಗೆ ಲಿಂಗದೀಕ್ಷೆಯನ್ನು ಕೊಟ್ಟು ಶೈಲಜಾ ಎಂದು ನಾಮಕರಣ ಮಾಡಿ ನಾಡೋಜ ಪಾಟೀಲ ಪುಟ್ಟಪನವರಿಂದ ಧಾರೆ ಎರೆಸಿ ಅವರ ಮದುವೆಯನ್ನು ಮಠದಲ್ಲಿಯೇ ಜರುಗಿಸಿದರು. ಜನರು ಸೇರುವ ಮದುವೆ, ಗೃಹಪ್ರವೇಶ, ಗಣಾರಾಧನೆ ಮುಂತಾದ ಕೌಟುಂಬಿಕ ಸಂದರ್ಭಗಳಲ್ಲಿ ಸರ್ವ ಶರಣ ಸಮ್ಮೇಳನಗಳನ್ನು ಏರ್ಪಡಿಸಿ ಬಸವಾದಿ ಶರಣರ ತತ್ವಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅವರು ಮಾಡಿದರು. ಉಂಡು ಹೋದರೆ ಸಾಲದು ಬಸವತತ್ತಗಳನ್ನು ಕೊಂಡು ಹೋಗಿ ಎಂಬುದು ಅವರ ನಿಲುವಾಗಿತ್ತು
.
ಹೊಳಲ್ಕೆರೆ ತಾಲ್ಲೂಕು ದೊಗ್ಗನಾಳ್ ಗ್ರಾಮದಲ್ಲಿ, ಕೆಂಚಪ್ಪನೆಂಬ ಹರಿಜನನು ತನ್ನ ಮನೆಯಲ್ಲಿ ಮದುವೆಯನ್ನು ಇಟ್ಟುಕೊಂಡು ಅದಕ್ಕೆ ಗುರುಗಳವರನ್ನು ಆಹ್ವಾನಿಸಿದ್ದನು. ಆದರೆ ಹರಿಜನರ ಮದುವೆಗೆ ಗುರುಗಳು ಹೋಗಕೂಡದೆಂದು ಕೆಲವರು ಊರುರು ತಿರುಗಿ ಅಪಪ್ರಚಾರ ಮಾಡಿದರು. ಗುರುಗಳವರ ಆಪ್ತರೂ ದೊಗ್ಗನಾಳಿಗೆ ಹೋಗಬಾರದೆಂದು ಒತ್ತಾಯಪಡಿಸಿದರು. ಈ ಭಾಗದ ಸ್ವಾತ್ರತ್ರ್ಯ ಹೋರಾಟಗಾರರಾಗಿದ್ದ ಕೊಟ್ರೆ ನಂಜಪ್ಪನವರು ಗುರುಗಳವರ ನೀತಿಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದರಲ್ಲದೆ ಗುರುಗಳವರಲ್ಲಿ ಅಷ್ಟೇ ಭಕ್ತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಮದುವೆಯ ದಿನ ಗುರುಗಳವರು ನೇರವಾಗಿ ಹರಿಜನ ಕೇರಿಗೆ ಹೋದರು. ತಾಲೂಕಿನಲ್ಲಿ ವಿರೋಧವಿದ್ದ ಕಾರಣ ಏನಾಗುತ್ತದೆಯೆಂದು ನೋಡಲು ನಾಲ್ಕಾರು ಸಾವಿರ ಜನ ಸೇರಿದ್ದರು.
ತಮ್ಮನ್ನು ವಿರೋಧಿಸುತ್ತಿದ್ದವರಗೆ ಗುರುಗಳು ಕೊಟ್ಟ ಉತ್ತರ: “ನಮ್ಮ ದೇಶದಲ್ಲಿ ಒಳ್ಳೆಯ ಜನರಿದ್ದಾರೆ; ಒಳ್ಳೆಯ ಮುಖಂಡತನವಿಲ್ಲ” ಒಳ್ಳೆಯ ಮಾರ್ಗದರ್ಶಕರಿಲ್ಲ. ಬಸವಣ್ಣನವರು ಇದಕ್ಕಾಗಿಯೇ ದುಡಿದರು. ಅಸ್ಪೃಶ್ಯರೆಂದು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿದ್ದ ಹರಿಜನ ಹರಳಯ್ಯ ಒಂದು ಶರಣು ಹೇಳಿದರೆ ಬಸವಣ್ಣನವರು ‘ಶರಣುಶರಣಾರ್ಥಿ’ ಎಂದು ಎರಡು ಶರಣು ಹೇಳಿದರು. ನಾವು, ನೀವು ಎಲ್ಲರೂ ಆ ಬಸವಣ್ಣನ ಅನುಯಾಯಿಗಳು. ನಮ್ಮ ನಡೆಯೊಂದು ಪರಿ, ನುಡಿಯೊಂದು ಪರಿ ಆಗಬಾರದು.
‘ನಡೆದಂತೆ ನುಡಿ, ನುಡಿದಂತೆ ನಡೆ’ ಇದು ನಮ್ಮ ಧರ್ಮದ ಸೂತ್ರ, ದೊಗ್ಗನಾಳ್ ಹರಿಜನ ಕೆಂಚಪ್ಪ ಬಹಿಷ್ಕಾರಕ್ಕೆ ಅರ್ಹನಲ್ಲ ; ಪುರಸ್ಕಾರಕ್ಕೆ ಅರ್ಹನು. ನಮ್ಮ ನೀತಿ ನಿಮಗೆ ಒಪ್ಪಿಗೆ ಆಗದಿದ್ದಲ್ಲಿ ‘ಮಠವನ್ನು ಬಿಟ್ಟು ಬಿಡುತ್ತೇವೆ. ಮಠಕ್ಕಿಂತಲೂ ತತ್ವ ಮುಖ್ಯ. ನಾವು ಸನ್ಯಾಸಿ ಆದದ್ದು ನಮ್ಮ ಗುರುಗಳ ಸತ್ಯ ಸಂಕಲ್ಪದಿಂದ. ಅದಕ್ಕೆ ಎರಡು ಬಗೆಯಲಾರೆವು! ನಮ್ಮದಂತು ಜಾತ್ಯಾತೀತ ನೀತಿ. ಜಾತ್ಯಾತೀತ ಭಾವನೆಯಿಂದ ಮಾತ್ರ ಈ ರಾಷ್ಟ್ರ ಬೆಳೆಯಲು ಸಾಧ್ಯ’. ಗುರುಗಳವರ ಮಾತುಗಳು ಜನರಿಗೆ ಚೆನ್ನಾಗಿಯೇ ನಾಟಿದವು; ಮದುವೆ ಸಾಂಗವಾಗಿ ನೆರವೇರಿತು.
ವಿದ್ಯಾ ಇಲಾಖೆಯ ಮುಖ್ಯಸ್ಥರಾಗಿದ್ದ ಕಸ್ತೂರಿರಾಜ ಚೆಟ್ಟರ ಒತ್ತಾಸೆಯಂತೆ ಗುರುವರ್ಯರು 1945 ರಲ್ಲಿ ಸಿರಿಗೆರೆಯಲ್ಲಿ ಮೊಟ್ಟ ಮೊದಲ ಹೈಸ್ಕೂಲನ್ನು ಆರಂಭಿಸಿದರು. ಶಾಲೆಗೆ ಕಟ್ಟಡವಿರಲಿಲ್ಲ,ಗುರುವರ್ಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳುಶ್ರಮದಾನದಿಂದ ಕಟ್ಟಡದ ಕೆಲಸ ಆರಂಭವಾಯಿತು. ವಿದ್ಯಾರ್ಥಿಗಳಿಗೆ ಭಾರತ ಸೇವಾದಳ ಶಿಕ್ಷಣವನ್ನು ಗುರುವರ್ಯರು ಕೊಡಿಸಿದ್ದರು. ಆಗಿನ ಕಾಲದಲ್ಲಿ ಇಡೀ ರಾಜ್ಯದಲ್ಲಿಯೇ ‘ಭಾರತ ಸೇವಾದಳ’ಕ್ಕೆ ಸಿರಿಗೆರೆಯೇ ಪ್ರಮುಖ ಕೇಂದ್ರವಾಗಿ ಪರಿಗಣಿಸಿತ್ತು. ಮೈಸೂರು ಕಾಂಗ್ರೆಸ್ ಅಧ್ಯಕ್ಷರಾದ ಟಿ. ಸಿದ್ದಲಿಂಗಯ್ಯನವರು ಮತ್ತು ಸೇವಾದಳದ ಸೇನಾಪತಿ ನಾ.ಸು. ಹರ್ಡೇಕರ್ ಸಿರಿಗೆರೆಯ ಭಾರತ ಸೇವಾದಳದ ಶ್ರಮಧಾನ ನೋಡಲು ಬಂದರು.
“ಗುರುಗಳೇ, ನಮ್ಮನ್ನು ನೀತಿವಂತರನ್ನಾಗಿಸುವ, ಶೀಲವಂತರನ್ನಾಗಿಸುವ, ಕರ್ಮವಂತರನ್ನಾಗಿಸುವ ತಾವು ನಮಗೆ, ನಮ್ಮ ಬಾಲಕರಿಗೆ, ಜನತೆಗೆ ಮಾರ್ಗದರ್ಶಕರಾಗಿ ನಮ್ಮನ್ನು, ನಮ್ಮ ದೇಶವನ್ನು, ವಿಶ್ವವನ್ನು ಉದ್ದಾರ ಮಾಡಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ” ಎಂದರು. ‘ಜಾತ್ಯತೀತ ರಾಷ್ಟ್ರದ ಅಡಿಗಲ್ಲು ಇಲ್ಲಿದೆ. ಇನ್ಯಾವ ಗುರುಕುಲದಲ್ಲೂ ಧಾರ್ಮಿಕ ಸಂಸ್ಥೆಯಲ್ಲೂ ನಾನು ಇಂತಹ ಐಕ್ಯತೆಯನ್ನಾಗಲಿ, ಪ್ರಯತ್ನವನ್ನಾಗಲೀ ಕಂಡಿಲ್ಲ” ಎಂದರು ಸಿಧ್ಧಲಿಂಗಯ್ಯನವರು. ವಿದ್ಯಾರ್ಥಿಗಳ ಶ್ರಮದಾನ ಶಿಕ್ಷಣದ ಎಲ್ಲಾ ಚಟುವಟಿಕೆಗಳನ್ನು ಕೇಂದ್ರದಲ್ಲಿ ಮಂತ್ರಿಗಳಾಗಿದ್ದ ಆರ್.ಆರ್ ದಿವಾಕರ್ ಅವರು ವಾರ್ತಾಚಿತ್ರವಾಗಿ ಚಿತ್ರಿಸಿಕೊಂಡು ರಾಷ್ಟ್ರಾದ್ಯಂತ ಪ್ರದರ್ಶಿಸಿದರು.
ಸ್ವಾತಂತ್ರ್ಯ ಪೂರ್ವದ ಚಳುವಳಿಯಲ್ಲಿ ಭಾಗವಹಿಸಿದವರೆಲ್ಲ ಜೈಲು ಸೇರಿದರು. ನಂತರ ಸನಿಹದಲ್ಲಿಯೇ ಡಿಸ್ಕಿಕ್ಟ್ ಬೋರ್ಡ್ ಚುನಾವಣೆ ಬಂದಿತು. ಜೈಲಿಗೆ ಹೋದವರೆಲ್ಲರ ಬಿಡುಗಡೆಯಾಯಿತು. ಜೈಲಿನಿಂದ ಹೊರಗೆ ಬಂದ ಎಸ್. ನಿಜಲಿಂಗಪ್ಪನವರು ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳುಗಳ ಪರವಾಗಿ ಪ್ರಚಾರ ಮಾಡತೊಡಗಿದರು. ಕಾಂಗ್ರಸ್ ಪಕ್ಷ ಸೇರಲು ಮಠದ ಶಿಷ್ಯರಾದ ಸಿದ್ದವೀರಪ್ಪನವರಿಗೆ ಆಗಿನ ಅನೇಕ ಗಣ್ಮರು ಒತ್ತಾಯಿಸಿದರು. ನಿಜಲಿಂಗಪ್ಪನವರು ಸಿದ್ದವೀರಪ್ಪನವರನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ಹೀಗಾಗಿ ಸಿದ್ದವೀರಪ್ಪನವರು ನಿಜಲಿಂಗಪ್ಪನವರ ಚುನಾವಣಾ ಸಭೆಗಳಲ್ಲಿ ಗಲಾಟೆ ಗದ್ದಲ ಮಾಡಿಸಿ ಭಾಷಣ ಮಾಡದಂತೆ ಜನರಿಂದ ಪ್ರತಿಭಟನೆ ಮಾಡಿಸಿದರು.
ಇದರಲ್ಲಿ ಮಠದ ಪಾತ್ರ ಏನೂ ಇಲ್ಲದಿದ್ದರೂ ಸಿದ್ಧವೀರಪ್ಪನವರು ಮಠದ ಶಿಷ್ಯ ರಾಗಿದ್ದರಿಂದ ಇದಕ್ಕೆಲ್ಲಾ ಮಠದ ಬೆಂಬಲವಿರಬೇಕೆಂದು ನಿಜಲಿಂಗಪ್ಪವರು ತಪ್ಪು ತಿಳಿದುಕೊಳ್ಳಲು ಕಾರಣವಾಯಿತು. ಇದರಿಂದ ಅವರಿಬ್ಬರ ಮಧ್ಯೆ ರಾಜಕೀಯ ವೈಷಮ್ಯ ಬೆಳೆಯಿತಲ್ಲದೆ ನಿಜಲಿಂಗಪ್ಪನ ವರಿಗೆ ಮೊದಲಿನಿಂದ ಇದ್ದ ಮಠದ ಆತ್ಮೀಯ ಸಂಬಂಧವೂ ಹದಗೆಡುವಂತೆ ಮಾಡಿತು. ಈ ಮಧ್ಯೆ ಹದಗೆಟ್ಟ ಸಂಬಂಧ ಪೂರ್ಣ ಹಾಳಾಗಲು ಗಾಳಿ ಹಾಕಿದವರು ಬಹಳ ಜನ. ನಿಜಲಿಂಗಪ್ಪನವರು ಗುರುಗಳ ಜೊತೆಗೆ ಜಿದ್ದಿಗ ಬಿದ್ಧರು. ಗುರುಗಳೇನೂ ಕಡಿಮೆಯಲ್ಲ.
ನಿಜಲಿಂಗಪ್ಪನವರು ಹೊಸದುರ್ಗದಲ್ಲಿ ಶಾಸಕ ಸ್ಥಾನಕ್ಕೆ ಚುನುವಣೆಗೆ ನಿಂತಾಗ ಹಾಲುಮತಸ್ಥರಾದ ಜಿ.ಟಿ.ರಂಗಪ್ಪ ಎಂಬುವರನ್ನು ಅವರ ವಿರುದ್ಧ ನಿಲ್ಲಿಸಿ ಸೋಲಿಸಿದರು. ಮುಂದೆ ನಿಜಲಿಂಗಪ್ಪನವರು ಸೇರಿಗೆ ಸವಾಸೇರು ಎನ್ನುವಂತೆ ಶಿಗ್ಗಾಂವಿ ಕ್ಷೇತ್ರದಿಂದ ಅಭ್ಯರ್ಥಿಗಳೆಲ್ಲರ ನಾಮಪತ್ರಗಳನ್ನು ಹಿಂತೆಗೆಸಿ ಅವಿರೋಧವಾಗಿ ಆಯ್ಕೆಯಾದರು, ಮುಖ್ಯಮಂತ್ರಿಯೂ ಆದರು. ನಂತರ ಸಿರಿಗೆರೆಯಲ್ಲಿ ಮಠದ ವಿರೋಧಿ ಬಣ ಸೆಡ್ಡು ಹೊಡೆಯಿತು, ಇಡೀ ಸಿರಿಗೆರೆ ರಣರಂಗವಾಗಿಮಾರ್ಪಟ್ಟಿತು.
ಮಠದ ಮೇಲೆ ನಾನಾ ವಿಧವಾದಮೊಕದ್ದಮೆಗಳ ಸರಮಾಲೆ. ಕೊನೆಗೆ ಎಲ್ಲ ಕೇಸುಗಳು ಸುಳ್ಳೆಂದು ಸಾಬೀತುದರೂ ಬಿಡದ ನಿಜಲಿಂಗಪ್ಪನವರ ಸರಕಾರ ಸಿರಿಗೆರೆ ಗ್ರಾಮದ ಮೇಲೆ ಪುಂಡುಗಂದಾಯ ವಿಧಿಸಿತು. ನಂತರ ನಿಜಲಿಂಗಪ್ಪನವರು ಹೋಗಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದಾಗ ಪುಂಡುಗಂದಾಯದ ವಿಷಯವಾಗಿ ವಿಧಾನಸಭೆಯಲ್ಲಿ ಅಂದಿನ ಶಾಸಕರಾದ ಬಿ. ಪರಮೇಶ್ವರಪ್ಪ ಮತ್ತು ಮಹದೇವ ಬಣಕಾರರು ಉಗ್ರವಾಗಿ ವಿರೋಧಿಸಿದರು. ಎಲ್ಲವನ್ನೂ ಪರಿಶೀಲಿಸಿದ ವೀರೇಂದ್ರ ಪಾಟೀಲರು ಅದನ್ನು ರದ್ದು ಮಾಡಿ, ಆದೇಶ ಹೊರಡಿಸಿದರು. ಜನಸಾಮಾನ್ಯರ ಬದಕನ್ನು ಕಟ್ಟಿಕೊಡಲು ಬದುಕಿನುದ್ದಕ್ಕೂ ಹೋರಾಡಿದ ಗುರುವರ್ಯರ ಜೀವನದಲ್ಲಿ ಇಂತಹ ಘಟನೆಗಳು ಒಂದಲ್ಲ, ಎರಡಲ್ಲ, ಸಾವಿರಾರು. ಅವರು ನೀಲಕಂಠನಾದ ಶಿವನೆಂತೆ ಎಲ್ಲ ಸಮುದಾಯದ ಸಮಷ್ಟಿ ಹಿತಕ್ಕಾಗಿ ಉಂಡದ್ದು ಹಾಲಾಹಲ! ಉಣಿಸಿದ್ದು ಅಮೃತ!
ಅಂತಹ ಮಹಾನ್ ಚೇತನ ನಮ್ಮನ್ನಗಲಿ ಇಂದಿಗೆ 28 ವರ್ಷಗಳಾದಾವು. ಪ್ರತಿವರ್ಷ ಅವರ ಸ್ಮರಣೆಯಲ್ಲಿ ನಡೆಸುತ್ತಿದ್ದ ‘ಶ್ರದ್ದಾಂಜಲಿ’ ಸಮಾರಂಭವನ್ನು ಕೋವಿಡ್ ಕಾರಣದಿಂದ ರದ್ದುಪಡಿಸಿದ್ದು.ಅಗಲಿದ ಆ ದಿವ್ಯ ಚೇತನಕ್ಕೆ ಮಹದೇವ ಬಣಕಾರರ ವಚನದೊಂದಿಗೆ ನಮ್ಮ ಭಾವಪೂರ್ಣ ಶ್ರದ್ದಾಂಜಲಿ.
ಶಿವನ ಚಿತ್ಕಳೆಯನ್ನಿಳೆಗೆ ಬೆಳಗಿ
ಬೆಳಗಿನೊಳಗೆ ಮಹಾಬೆಳಗಾಗಿ ಕಂಗೊಳಿಸಿದಾತಂಗೆ
ಮರಣವೆಂದೊಡೆಂತಯ್ಯಾ – ಮಹಾಜ್ಯೋತಿ ತಾನಾದನಲದೆ
ಅದು ಕಾರಣ ಎನ್ನ ವರಗುರು ಶಿವಕುಮಾರಪ್ರಭು
ನೆನೆದವರ ಮನದೊಳಗಿಪ್ಪ
ಸದ್ಭಕ್ತರ ಅಂಗೈಯ ಲಿಂಗವಾಗಿಪ್ಪ ನೋಡಾ ಬಸವಣ್ಣ ಸಾಕ್ಷಿಯಾಗಿ!
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
