ಇಂದಿನಿಂದ 2023 ನೇ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇವೆ. ಕೆಲವರಿಗೆ ಕಳೆದ ವರ್ಷ ಹರ್ಷ ತಂದಿರಬಹುದು. ಕೆಲವರಿಗೆ ದುಃಖ ತಂದಿರಬಹುದು. ಈ ವರ್ಷ ಹರ್ಷ ತರಬಹುದೆಂಬ ನಿರೀಕ್ಷೆಯಲ್ಲಿರಬಹುದು. ಕಾಲಮಾನದ ದೃಷ್ಟಿಯಿಂದ ಗ್ರಿಗೋರಿಯನ್ ಕ್ಯಾಲೆಂಡರ್ ನಲ್ಲಿ ಇದು ಹೊಸ ವರ್ಷವೇ ಹೊರತು ಕೌಟುಂಬಿಕ ಜೀವನದಲ್ಲಿ ಎಲ್ಲರಿಗೂ ಹೊಸ ವರ್ಷ ಆಗುವುದಿಲ್ಲ. ನೀವು ಹುಟ್ಟಿದ/ಮದುವೆಯಾದ ದಿನಾಂಕ ಜನವರಿಯಲ್ಲಿ ಇದ್ದರೆ ನಿಮಗೆ ಜನವರಿ ಹೊಸ ವರ್ಷ.
ನೀವು ಹುಟ್ಟಿದ/ಮದುವೆಯಾದ ದಿನಾಂಕ ಫೆಬ್ರವರಿಯಲ್ಲಿದ್ದರೆ ನಿಮಗೆ ಫೆಬ್ರವರಿ ಹೊಸ ವರ್ಷ, ಸಂಭ್ರಮದಿಂದ ಆಚರಿಸುತ್ತೀರಿ. ನೀವು ಮರಣ ಹೊಂದುವ ದಿನಾಂಕ ಯಾವ ತಿಂಗಳು ಬರುತ್ತದೆಯೋ ಅದು ನಿಮ್ಮ ವಾರ್ಷಿಕ ಪುಣ್ಯತಿಥಿ. ಆದರೆ ಅದು ನಿಮಗೆ ಗೊತ್ತಾಗುವುದೇ ಇಲ್ಲ. ಅದನ್ನು ನಿಮ್ಮ ಬಂಧುಗಳು ಆಚರಿಸುತ್ತಾರೆ. ಇದನ್ನು ಓದಿ ನೀವು ಬೆಚ್ಚಿ ಬೀಳಬೇಡಿ: “ನೀ ಹುಟ್ಟಿಸಿದಲ್ಲಿ ಹುಟ್ಟಿ ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯಾ! ನೀವಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯಾ… ಕೂಡಲಸಂಗಮ ದೇವಾ” ಎನ್ನುತ್ತಾರೆ ಬಸವಣ್ಣನವರು. “ಜಾತಸ್ಯ ಮರಣಂ ಧೃವಮ್” ಎನ್ನುವಂತೆ ಹುಟ್ಟು ಮತ್ತು ಸಾವು ಮನುಷ್ಯನ ಕೈಯಲ್ಲಿಲ್ಲ. ಅದು ದೈವ ನಿಯಾಮಕ, ಧೃತಿಗೆಡದೆ ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಕಾಲಾವಧಿಯಲ್ಲಿ ನೀವು ಮಾಡಬೇಕಾದ ಕರ್ತವ್ಯಗಳನ್ನು ಮಾಡಿರಿ.
ಹಳೆಯ ಕಾಲದ ಡೈರಿಗಳಲ್ಲಿ ಲೆಕ್ಕ ಬರೆದಿಡಲು ಅನುಕೂಲವಾಗುವಂತೆ ಜಮಾಖರ್ಚು ತಃಖ್ತೆಯ ಪುಟಗಳು ಕೊನೆಯಲ್ಲಿ ಇರುತ್ತಿದ್ದವು. ಈಗಿನ ಡೈರಿಗಳಲ್ಲಿ ಆ ಪುಟಗಳು ಮಂಗಮಾಯ, ಐ.ಟಿ ಅಧಿಕಾರಿಗಳು ಧಾಳಿ ಮಾಡುತ್ತಾರೆಂಬ ಬಯವೋ ಏನೋ! ಆದರೆ ನಮ್ಮ ಗುರುವರ್ಯರು ಬರೆದಿಟ್ಟಿರುವ ಲೆಕ್ಕ ಯಾವ ಐ.ಟಿ ಕಾಯಿದೆಗೂ ನಿಲುಕದ ಲೆಕ್ಕ. ಇದನ್ನು ಆಧ್ಯಾತ್ಮಿಕ ಜೀವನದಲ್ಲಿ ಅಡಿ ಇಡುವ “ಮುಮುಕ್ಷುವಿನ ಜಮಾ-ಖರ್ಚು ತಃಖ್ತೆ” ಎನ್ನಬಹುದು.
1938ರ ಡೈರಿಯ ಕೊನೆಯ ಜ್ಞಾಪಕ ಪುಟದಲ್ಲಿ (Memorandum) ನಮ್ಮ ಗುರುವರ್ಯರು ಬರೆದಿಟ್ಟಿರುವ ಈ ಕೆಳಗಿನ ಸಾಲು ಎಲ್ಲರೂ ಜೀವನದಲ್ಲಿ ನೆನಪಿಟ್ಟುಕೊಳ್ಳಬಹುದಾದ ಸೂತ್ರಬದ್ಧವಾದ ಹಿತೋಕ್ತಿಯಾಗಿದೆ. “ದೇವಾ! ನಿನ್ನನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾಗಿದೆಯೇ ವಿನಾ ಈ ಸಂಸಾರದಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳುವ ವಸ್ತು ಯಾವುದೂ ಇಲ್ಲ.!”
ಜಗತ್ತನ್ನು ಕಳೆದೆರಡು ವರ್ಷಗಳಿಂದ ಕಾಡಿದ ಸಮಸ್ಯೆಗಳು ದೈವ ಕೃಪೆಯಿಂದ ಕೊನೆಯಾಗಲಿ. ಹೊಸವರ್ಷವು ಹೊಸ ಬೆಳಕು, ಹೊಸ ಸುಖ ಸಂತೋಷವನ್ನು ತರುವಂತಾಗಲಿ! ಎಂಬುದೇ ನಮ್ಮ ಹಾರೈಕೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ಸಿರಿಗೆರೆ.