Connect with us

Dvgsuddi Kannada | online news portal | Kannada news online

ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡಿ; ಸಂಕ್ರಾಂತಿಗೆ ತರಳಬಾಳು ಶ್ರೀ ಸಂದೇಶ

ಪ್ರಮುಖ ಸುದ್ದಿ

ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡಿ; ಸಂಕ್ರಾಂತಿಗೆ ತರಳಬಾಳು ಶ್ರೀ ಸಂದೇಶ

ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡುವ ದಿನ ಸಂಕ್ರಾಂತಿ’. ಎಂದೂ ಕೆಟ್ಟ ಮಾತನ್ನಾಡದ ಸಜ್ಜನರು ತಮ್ಮ ಮೇಲೆ ಇದೆಂಥಾ ಮಿಥ್ಯಾರೋಪವೆಂದು ಸಿಡಿಮಿಡಿಗೊಳ್ಳದೆ ಮುಗುಳ್ನಕ್ಕು ಬಾಯ್ತುಂಬ ಎಳ್ಳು-ಬೆಲ್ಲ ಮೆಲುತ್ತಾರೆ. ಅವರ ಸ್ನೇಹಿತರಿಗೂ/ಬಂಧುಗಳಿಗೂ ಎಳ್ಳುಬೆಲ್ಲ ಕೊಟ್ಟು ಸಂತೋಷಪಡುತ್ತಾರೆ. ಲಕ್ಷಾಂತರ ಜನ ಹಿಂದೂಗಳು ಪ್ರಯಾಗದ ಪಾವನ ಗಂಗೆಯ ತ್ರೀವೇಣೀಸಂಗಮದಲ್ಲಿ ಮಿಂದು ನಲಿದೇಳುತ್ತಾರೆ. ಗುಜರಾತಿನಲ್ಲಿ ಮುಗಿಲು ಮುಟ್ಟುವಂತೆ ಪೈಪೋಟಿಯಿಂದ ಗಾಳಿಪಟ ಹಾರಿಸುತ್ತಾರೆ. ತಮಿಳುನಾಡಿನಲ್ಲಿ ವಿಶೇಷ ಭಕ್ಷವಾದ ‘ಪೊಂಗಲ್‌’ ಮಾಡಿ ಸವಿಯುತ್ತಾರೆ. ಸಂಕ್ರಾಂತಿ ಹಬ್ಬವನ್ನು ಭಾರತೀಯರಷ್ಟೇ ಅಲ್ಲ ದಕ್ಷಿಣ ಏಷ್ಯಾದ ನೇಪಾಳ, ಥೈಲ್ಯಾಂಡ್‌ ಮತ್ತಿತರ ದೇಶದವರೂ ಆಚರಿಸುತ್ತಾರೆ. ಥೈಲ್ಯಾಂಡ್‌ನಲ್ಲಿ ಈ ಹಬ್ಬಕ್ಕೆ ‘ಸೊಂಕ್ರಾನ್‌’ ಎಂದು ಕರೆಯುತ್ತಾರೆ.

ಚಾಂದ್ರಮಾನ ಪಂಚಾಂಗದ ಪ್ರಕಾರ ಭಾರತೀಯ ಹಬ್ಬಗಳು ಪ್ರತಿವರ್ಷವೂ ಬೇರೆ ಬೇರೆ ದಿನಾಂಕಗಳಂದು ಬಂದರೆ ಸೌರಮಾನ ಪಂಚಾಂಗದಲ್ಲಿ ಸೂರ್ಯನ ಗತಿಯನ್ನು ಅವಲಂಬಿಸಿ ಬರುವ ಈ ಸಂಕ್ರಾಂತಿ ಹಬ್ಬ ಮಾತ್ರ ಯಾವಾಗಲೂ ಜನವರಿ 14 ರಂದೇ ಬರುತ್ತದೆ. ಇಲ್ಲಿಂದ ಮುಂದಕ್ಕೆ ಆರು ತಿಂಗಳ ಕಾಲ ಸೂರ್ಯ ತನ್ನ ಗತಿಯನ್ನು ಬದಲಾಯಿಸಿ ಉತ್ತರದಿಕ್ಕಿನತ್ತ ಪಯಣಿಸುವುದರಿಂದ ಇದನ್ನು ‘ಉತ್ತರಾಯಣ’ ಎಂದು ಕರೆಯುತ್ತಾರೆ. ಖಗೋಳವಿಜ್ಞಾನಿಗಳ ಪ್ರಕಾರ ಆಗಲೇ ಒಂದು ವಾರದ ಹಿಂದೆ ಸೂರ್ಯ ತನ್ನ ಗತಿಯನ್ನು ಬದಲಾಯಿಸಿದ್ದಾನೆ. ಈ ಅವಧಿಯಲ್ಲಿ ಹಗಲು ಹೊತ್ತು ಹೆಚ್ಚುತ್ತಾ ಹೋಗುತ್ತದೆ; ರಾತ್ರಿ ಕಡಿಮೆಯಾಗುತ್ತದೆ.

ಸಂಸಾರದ ಬೇಗೆಯಲ್ಲಿ ಬೆಂದ ಮನಸ್ಸಿಗೆ ಮುದವನ್ನು ನೀಡುವ ದಿನಗಳೇ ಹಬ್ಬಗಳು. ಬದುಕಿಗೆ ಹೊಸ ಚೈತನ್ಯವನ್ನು ತುಂಬುವ ಇಂತಹ ಹಬ್ಬಗಳು ಇಲ್ಲದೇ ಹೋಗಿದ್ದರೆ ಸಂಸಾರದ ಏಕತಾನತೆಯಲ್ಲಿ ಜಿಗುಪ್ಸೆಗೊಂಡು ಅದೆಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದರೋ ಏನೋ. ಕಾವ್ಯಕ್ಕೆ ನವನವೋನ್ಯೇಷಶಾಲಿನೀ ಎನ್ನುತ್ತಾರೆ. ಈ ಮಾತು ಅಕ್ಷರಶಃ ಹಬ್ಬಗಳಿಗೂ ಅನ್ವಯಿಸುತ್ತದೆಯೆಂದರೆ ಅತಿಶಯೋಕ್ತಿಯಾಗಲಾರದು. ಪಂಚಾಂಗದ ಲೆಕ್ಕಾಚಾರದ ಪ್ರಕಾರ ಸಂಕ್ರಾಂತಿಯಂದು ಸೂರ್ಯನು ಧನುಸ್‌ರಾಶಿಯಿಂದ ಮಕರರಾಶಿಗೆ ಕಾಲಿಡುತ್ತಾನೆ. ಮಕರರಾಶಿಯ ಅಧಿಪತಿ ಶನಿ; ಸೂರ್ಯನ ಮಗ ತಾಯಿ ಸಂಜ್ಞಾ ಕಾರಣಕ್ಕಾಗಿ ತಂದೆ-ಮಗನಿಗೆ ಯಾವಾಗಲೂ ಸರಿಯಿಲ್ಲ. ಇಬ್ಬರು ಹೆಂಡತಿಯರ (ಸಂಜ್ಞಾ ಮತ್ತು ಛಾಯಾ) ಗಂಡನಾಗಿ ತಂದೆ ತನ್ನ ಜೀವನಾಂಶಕ್ಕೆ ಒಂದೇ ಮನೆಯ(ಸಿಂಹರಾಶಿ) ಇಟ್ಟುಕೊಂಡು ಮಗನಿಗೆ ಎರಡು ಮನೆಗಳನ್ನು (ಮಕರ-ಕುಂಭ ರಾಶಿಗಳು) ಕೊಟ್ಟಿದ್ದರೂ ಮಗನಿಗೆ ತೃಪ್ತಿ ಇಲ್ಲ. ಉಭಯತರ ಮಧ್ಯೆ ಏನೇ ಜಗಳ ಇದ್ದರೂ ಸ್ವತಃ ತಂದೆಯೇ ಮನೆಗೆ ಬಂದಾಗ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಬೇಕಾದ್ದು ಮಗನ ಕರ್ತವ್ಯ. ಮಗ ಮನೆಯಲ್ಲಿ ಇಲ್ಲದಿರುವುದನ್ನು ನೋಡಿಕೊಂಡು ತಂದೆ ಬಂದನೋ, ಬಡಪಾಯಿ ತಂದೆ ಒಂದು ತಿಂಗಳು ಇದ್ದು ಹೋಗಲಿ ಬಿಡು ಎಂದು ಮಗ ಸುಮ್ಮನಿದ್ದಾನೋ ಹೇಳಲಾಗದು.

ಮಗ ಸುಮ್ಮನಿರುವುದೂ ಹೆಚ್ಚಿನ ಮಾತೇ ಸರಿ. ಜಗತ್ತಿನ ಜನರಿಗೇ ಬೆಳ್ಳಂಬೆಳಕಾಗಿ ಕಾಣುವಂತೆ ಬುದ್ಧಿ ಹೇಳಿ ಪ್ರಾತಃಸ್ಮರಣೀಯನೆನಿಸಿಕೊಂಡಿರುವ (ಓಂ ತತ್‌ ಸವಿತುರ್ವರೇಣಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್‌) ಸೂರ್ಯದೇವನಿಗೆ ಅಷ್ಟೂ ಬುದ್ಧಿ ಬೇಡವೇ? ಅಷ್ಟೊಂದು ಉರಿಸುವ ಗಂಡನ ಕೈಯಲ್ಲಿ ಯಾವ ಹೆಂಡತಿಗಾದರೂ ಹೇಗೆ ಬಾಳುವೆ ಮಾಡಲು ಸಾಧ್ಯ ನೀವೇ ಹೇಳಿ. ಪಾಪ, ಚಿಕ್ಕ ಹುಡುಗ ಮಾಡಿದ ತಪ್ಪಾದರೂ ಏನು? ತಾಯಿಯ ಪರ ನಿಂತು ವಾದಿಸಿದನೆಂದು ಅವನ ಕಣ್ಣು ಹೋಗುವಂತೆ ನಿರ್ದಯಿಯಾಗಿ ಹೊಡೆಯಬಹುದೇ? ಒಂದು ಕಣ್ಣನ್ನು ಶಾಶ್ವತವಾಗಿ ಕಳೆದುಕೊಂಡ ಶನಿ ಜೀವನದುದ್ದಕ್ಕೂ ಜನರಿಂದ ಒಕ್ಕಣ್ಣ ಎನಿಸಿಕೊಂಡು ಬದುಕಲು ಅವನಿಗಾದರೂ ಕಷ್ಟವಾಗುತ್ತದೆಯಲ್ಲವೇ? ತಾನು ಮಾಡದ ತಫ್ಪಿಗಾಗಿ ಹಾಗೆ ಹಂಗಿಸುವವರನ್ನು ಕಂಡು ಸಿಟ್ಟಿಗೆದ್ದು ಶನಿ ಕಾಡದೆ ಬಿಡುತ್ತಾನೆಯೇ? ಆದರೂ ‘ಶನಿ ಕಾಡಿ ಸತ್ತವರಿಲ್ಲ’ ಎಂಬ ಸಮಾಧಾನಕರವಾದ ಗಾದೆ ಮಾತಿದೆ.

ನೀವೇನೂ ಹೆದರಬೇಕಾಗಿಲ್ಲ. ಅದೇನೇ ಇರಲಿ, ಅಂತೂ ಸೂರ್ಯನಿಗೆ ತಾನು ಕಟ್ಟಿಸಿದ ಮನೆಯಲ್ಲಿ ಒಂದು ತಿಂಗಳಾದರೂ ಇರಲು ಅವಕಾಶ ಸಿಕ್ಕಿದ್ದಕ್ಕಾಗಿ ‘ಸ್ವರ್ಗದ ಬಾಗಿಲು’ ತೆರೆದಷ್ಟೇ ಸಮಾಧಾನವಾಗಿರಬೇಕು. ಸ್ವರ್ಗದ ಬಾಗಿಲು ತೆರೆಯುವುದು ಇದೇ ದಿನ ಎಂದು ಹೇಳುತ್ತಾರೆ. ಕುರುಕ್ಷೇತ್ರದ ಕಾಳಗದಲ್ಲಿ ಅರ್ಜುನನಿಂದ ಹತನಾದ ಇಚ್ಛಾಮರಣಿ ಭೀಷ್ಮ ಶರಶಯ್ಯೆಯ ಮೇಲೆ ಮಲಗಿ ಸ್ಪರ್ಗದ ಬಾಗಿಲು ತೆರೆಯುವ ಇದೇ ದಿನವನ್ನು ಎಷ್ಟೋ ದಿನಗಳ ಕಾಲ ಕಾದಿದ್ದನಂತೆ! ಸ್ವರ್ಗದಲ್ಲಿರುವ ಮನೆಗಳು ಮಳೆಗಾಲದಲ್ಲಿ ನೆರೆಹಾವಳಿಯಿಂದ ಜಲಾವೃತಗೊಂಡು,ಚಳಿಗಾಲದಲ್ಲಿ ಥಂಡಿಗಾಳಿಯ ಹೊಡೆತಕ್ಕೆ ಸಿಲುಕಿ ಬಾಗಿಲು ಮುಚ್ಚಿಕೊಂಡಿದ್ದವೋ ಏನೋ!

ಸ್ವರ್ಗ-ನರಕಗಳು ಬೇರೆ ಎಲ್ಲಿಯೋ ಇರುವ ಲೋಕಗಳಲ್ಲ, ಇಲ್ಲಿಯೇ ನಮ್ಮ ನಡೆ-ನುಡಿಗಳಲ್ಲಿ ಇರುವ ವಿಭಿನ್ನ ಅವಸ್ಥೆಗಳು. ಒಬ್ಬನನ್ನು ‘ಅಯ್ಯಾ’ ಎಂದು ಗೌರವದಿಂದ ಮಾತನಾಡಿಸುವುದರಲ್ಲಿ ಸ್ವರ್ಗಸುಖವಿದೆ; ‘ಎಲವೋ’ ಎಂದು ದೂಷಿಸುವುದರಲ್ಲಿ ನರಕಯಾತನೆ ಇದೆ. ಒಂದು ಒಳ್ಳೆಯ ಮಾತು ಇನ್ನೊಬ್ಬನನ್ನು ಒಳ್ಳೆಯ ಮಾತುಗಳನ್ನಾಡಲು ಪ್ರೇರೇಪಿಸುತ್ತದೆ. ಸ್ನೇಹ-ಸೌಹಾರ್ದತೆಗೆ ದಾರಿ ಮಾಡಿಕೊಡುತ್ತದೆ. ಅದೇ ಕೆಟ್ಟ ಮಾತು ಇನ್ನೊಬ್ಬನನ್ನು ಕೆರಳಿಸುತ್ತದೆ; ಕಲಹಕ್ಕೆ ಕಾರಣವಾಗುತ್ತದೆ.ಸಹೃದಯಿ ಓದುಗರೇ, ನಿಮ್ಮ ಜೀವನಕ್ರಾಂತಿಯಲ್ಲಿ ಸಂಕ್ರಾಂತಿಯು ಶುಭಕಾಂತಿಯ ತರಲಿ..!

-ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top