ದಾವಣಗೆರೆ: ಬೆಳಗಾವಿ ಮೊಕ್ಕಾಂನಲ್ಲಿರುವ ಕ್ರಾಂತಿವೀರ, ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಮತ್ತು ಸಮಾಧಿ ಸ್ಥಳವಾದ ನಂದಗಡಕ್ಕೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಗೌರವ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಮ್ಮ ಸಂದೇಶ ರವಾನಿಸಿರುವ ಶ್ರೀಗಳು, ರಾಯಣ್ಣ ತನ್ನ ಹೋರಾಟ ಮತ್ತು ತ್ಯಾಗದಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿಯಾದವರು. ಕಿತ್ತೂರು ಸಾಮ್ರಾಜ್ಯದ ಮೇಲಿನ ಅವನ ನಿರಂತರ ಪ್ರೀತಿ ಮತ್ತು ಚೆನ್ನಮ್ಮ ರಾಣಿಗೆ ನಿಷ್ಠೆಯ ಸೇವೆ, ಆದರ್ಶ, ಸ್ವಾತಂತ್ರ್ಯ ಹೋರಾಟ, ಸಾಹಸ ಹಾಗೂ ನಾಡ ಪ್ರೇಮದಿಂದ “ಲೆಜೆಂಡರಿ ವಾರಿಯರ್” ಎಂದು ಗೌರವಿಸಲ್ಪಟ್ಟನು. ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿಗೆ ಇದಕ್ಕಿಂತ ಉತ್ತಮವಾದ ವಿವರಣೆ ಇರಲಾರದು ಎಂದು ಇತಿಹಾಸದಲ್ಲಿ ದಾಖಲಾಗಿದೆ ಎಂದರು.
ಬ್ರಿಟಿಷರು ತಮ್ಮ ಕುಖ್ಯಾತ ಆಡಳಿತದಿಂದ “ಡಾಕ್ಟ್ರಿನ್ ಆಫ್ ಲ್ಯಾಪ್ಸ್” ಅನ್ನು ಅನುಸರಿಸಿ ಕಿತ್ತೂರು ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದರು ವಿರುದ್ಧ ಹೋರಾಡಿ ನೇಣಿಗೆ ಕೊರಳೊಡ್ಡಿದ ಸಂದರ್ಭದಲ್ಲಿಯೂ ಸಂಗೊಳ್ಳಿ ರಾಯಣ್ಣ : “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ.”ಎಂದು ಹೇಳಿರುವುದು ರಾಯಣ್ಣನ ಪರಾಕ್ರಮ ಮತ್ತು ದೃಢಸಂಕಲ್ಪದ ದ್ಯೋತಕವಾಗಿದೆ. ರಾಯಣ್ಣನಂತಹ ಸ್ವಾತಂತ್ರ್ಯ ಹೋರಾಟಗಾರರು ಎಂದಿಗೂ ಜಾತಿಗೆ ಸೀಮಿತರಾದವರಲ್ಲ ಅವರು ರಾಷ್ಟದ ಆಸ್ತಿ ಮುಂದಿನ ಪೀಳಿಗೆಗೆ ಸದಾ ಆದರ್ಶಪ್ರಾಯವಾದವರು ಎಂದು ಶ್ರೀ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.