ಡಿವಿಜಿ ಸುದ್ದಿ, ಸಿರಿಗೆರೆ: ಪ್ರತಿ ವರ್ಷದಂತೆ ಸೆ. 24 ರಂದು ನಡೆಯಬೇಕಿದ್ದ ಹಿರಿಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ದಿನಾಂಕ 10-9-2020 ರಂದು ನಮ್ಮ ‘ಬಿಸಿಲು ಬೆಳದಿಂಗಳು’ ಅಂಕಣದಲ್ಲಿ ಬರೆದ “ಕೋವಿಡ್ ಕಾಲದಲ್ಲಿ ಸಂಪ್ರದಾಯಗಳ ಪಾಲನೆ ಅನಿವಾರ್ಯವೇ ?” ಎಂಬ ಲೇಖನವನ್ನು ನೀವು ಓದಿರಬಹುದು. ಸಂಪ್ರದಾಯಗಳ ಮೌಲ್ಯಮಾಪನ ಪ್ರಸ್ತುತ ಸಂದರ್ಭದಲ್ಲಿ ತುರ್ತಾಗಿ ಆಗಬೇಕಾಗಿದೆ. ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಆಚರಣೆಯಿಂದ ವ್ಯಕ್ತಿಗತ ಮತ್ತು ಸಾಮಾಜಿಕ ಸಂಕಷ್ಟಗಳುಎದುರಾಗುವಂತಿದ್ದರೆ ಅವುಗಳನ್ನು ನಿಲ್ಲಿಸುವುದು ವಿಹಿತ. ಸದ್ಯದ ಸಂಪ್ರದಾಯವೆಂದರೆ ಜನಜಂಗಸೇರದಂತೆ ಎಚ್ಚರಿಕೆ ವಹಿಸುವುದು. ಮೂಗು ಬಾಯಿಕಣ್ಣುಗಳ ಮೂಲಕ ಹರಡದಂತೆ ಮಾಸ್ಕ್ ಧರಿಸುವುದು! ಹಳೆಯ ಸಂಪ್ರದಾಯಗಳನ್ನು ಬದಿಗೊತ್ತಿ ಈ ಹೊಸ ಸಂಪ್ರದಾಯಗಳನ್ನು ಜಾರಿಗೆ ತರುವುದರಲ್ಲಿ ವ್ಯಕ್ತಿಯ ಹಿತ ಮತ್ತು ಸಮಾಜದ ಹಿತ ಅಡಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಗುರುವಿಗೆ ಅಂಜಿ ಶಿಷ್ಯರೂ ಶಿಷ್ಯರಿಗೆ ಅಂಜಿ ಗುರುವೂ ನಡೆಯಬೇಕೆಂಬುದು ನಮ್ಮ ಲಿಂಗೈಕ್ಯ ಗುರುವರ್ಯರ ಅಣತಿ. ಆದರೆ ಈಗ ಗುರುಶಿಷ್ಯರಾದಿಯಾಗಿ ಎಲ್ಲರೂ ಕೊರೊನಾ ವೈರಾಣುವಿಗೆ ಅಂಜಿ ನಡೆಯಬೇಕಾದ ವಿಷಮ ಪರಿಸ್ಥಿತಿ ಎದುರಾಗಿದೆ. ಇದುವರೆಗೆ ನಗರ ಪ್ರದೇಶಗಳಿಗೆ ವ್ಯಾಪಿಸಿದ್ದ ಕೊರೊನಾ ಈಗ ಹಳ್ಳಿಗಳಿಗೂ ಹಬ್ಬುತ್ತಿದೆ. ಇತ್ತೀಚೆಗೆ ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವರುಕೊರೊನಾಕ್ಕೆ ಬಲಿಯಾಗಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಷ್ಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಇದೇ ಸೆಪ್ಟೆಂಬರ್ 24 ರಂದು ಗುರುವಾರ ನಡೆಯಬೇಕಾಗಿದ್ದ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭವನ್ನು ಸ್ಥಗಿತ ಗೊಳಿಸಲು ತೀರ್ಮಾನಿಸಲಾಗಿದೆ.
ಲಿಂಗೈಕ್ಯ ಗುರುವರ್ಯರ ಮೇಲೆ ಅಪಾರ ಶ್ರದ್ಧಾಭಕ್ತಿಯುಳ್ಳ ಶಿಷ್ಯರು ಯಾರೂ ಆ ದಿನ ಸಿರಿಗೆರೆಗೆ ಬರದೆ ತಮ್ಮ ತಮ್ಮ ಮನೆಗಳಲ್ಲಿಯೇ ಪರಮಪೂಜ್ಯರ ಭಾವಚಿತ್ರವನ್ನು ಇಟ್ಟು ತಮ್ಮ ಭಕ್ತಿ ಗೌರವಗಳನ್ನು ಸಲ್ಲಿಸಲು ಸೂಚಿಸಿ ಎಂಬ ಸಂದೇಶ ನೀಡಿದ್ದಾರೆ.



