ಬೆಂಗಳೂರು: ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ವಿವಿಧ ಸ್ಥಳಗಳಿಗೆ ಸಂಚರಿಸುತ್ತಿದ್ದ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಡಿಸೆಂಬರ್ ತಿಂಗಳ ಕೊನೆಯ ತನಕ ಹಬ್ಬದ ವಿಶೇಷ ರೈಲುಗಳು ನಿಗದಿತ ವೇಳಾಪಟ್ಟಿ ಅನ್ವಯ ಸಂಚಾರ ನಡೆಸಲಿವೆ.
ಕೆಎಸ್‌ಆರ್ ಬೆಂಗಳೂರು-ಜೋಧಪುರ ನಡುವೆ ವಾರಕ್ಕೆ 2 ಬಾರಿ ಸಂಚಾರ ನಡೆಸುವ ರೈಲನ್ನು ಡಿಸೆಂಬರ್ 30ರ ತನಕ ವಿಸ್ತರಣೆ ಮಾಡಲಾಗಿದೆ. ಜೋಧಪುರ-ಕೆಎಸ್‌ಆರ್ ಬೆಂಗಳೂರು ರೈಲನ್ನು 2021ರ ಜನವರಿ 2ರ ತನಕ ವಿಸ್ತರಿಸಲಾಗಿದೆ.
ಮೈಸೂರು-ಅಜ್ಮೀರ್ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲನ್ನು ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಲಾಗಿದೆ. ಅಜ್ಮೀರ್-ಮೈಸೂರು ನಡುವಿನ ರೈಲನ್ನು ಜನವರಿ 3ರ ತನಕ ವಿಸ್ತರಣೆ ಮಾಡಲಾಗಿದೆ.
ಮೈಸೂರು-ಟ್ಯುಟಿಕಾರಿನ್ ಪ್ರತಿದಿನದ ರೈಲು, ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಪ್ರತಿದಿನದ ರೈಲು, ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಪ್ರತಿದಿನದ ರೈಲು, ಬೆಂಗಳೂರು ಕಂಟೋನ್ಮೆಂಟ್-ಭುವನೇಶ್ವರ ಮಂಗಳವಾರದ ರೈಲು, ಭುವನೇಶ್ವರ-ಬೆಂಗಳೂರು ಕಂಟೋನ್ಮೆಂಟ್ ಭಾನುವಾರದ ರೈಲನ್ನು ಸಹ ವಿಸ್ತರಣೆ ಮಾಡಲಾಗಿದೆ.