ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಅವರನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯಲ್ಲಿ ಫೆ.28ರ ರಾತ್ರಿ ನಡೆದ ಗಲಾಟೆ ಘಟನೆ ಬಳಿಕ ಬಿಜೆಪಿ ಮುಖಂಡರು ದೂರು ದಾಖಲಿಸಿದ್ದರು. ನಂತರ ಬಸವೇಶ್ ಭದ್ರಾವತಿಯಲ್ಲಿ ಕಾಣಿಸಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಪೊಲೀಸರು ಬಸವೇಶ್‍ನನ್ನು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.
ಫೆ.28ರ ರಾತ್ರಿ ಭದ್ರಾವತಿಯಲ್ಲಿ ನಡೆದ ಪ್ರೊ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್ ತಂಡ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದರು. ಇದರಿಂದ ಸಿಟ್ಟಾಗಿದ್ದ ಶಾಸಕ ಸಂಗಮೇಶ್ವರ್ ಪುತ್ರ, ಸಹೋದರನ ಪುತ್ರರಿಂದ ತಂಡದ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಶಾಸಕ ಸಂಗಮೇಶ್ವರ್ ಸೇರಿದಂತೆ ಅವರ ಕುಟುಂಬದವರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಘಟನೆ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಬೆದರಿಕೆ, ಜಾತಿ ನಿಂದನೆ ಕೇಸ್ನಲ್ಲಿ ಬಸವೇಶ್ A-4 ಆರೋಪಿಯಾಗಿದ್ದು, ಈ ಪ್ರಕರಣ ಸಂಬಂಧ ಈತನಕ ಸುಮಾರು 15 ಮಂದಿಯನ್ನು ಬಂಧಿಸಲಾಗಿದೆ. ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಸವೇಶ್ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.