ಶಿವಮೊಗ್ಗ: ಮೀಸಲಾತಿಗೆ ಆಗ್ರಹಿಸಿ ವಿವಿಧ ಸಮಾಜಗಳು ಹೋರಾಟ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಈಶ್ವರಪ್ಪ, ಮೀಸಲಾತಿ ಕುರಿತು ಸಂಪುಟದಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಮೀಸಲಾತಿ ವಿಚಾರವಾಗಿ ಎಲ್ಲಾ ರಾಜ್ಯಗಳು ಅಭಿಪ್ರಾಯ ನೀಡುವಂತೆ ಸುಪ್ರೀಂ ಕೋರ್ಟ್ ಕೇಳಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ಚರ್ಚೆ ನಡೆದಿದ್ದು, ಮೀಸಲಾತಿ ಪಡೆದವರೇ ಹೆಚ್ಚು ಹೆಚ್ಚು ಅನುಕೂಲಗಳನ್ನು ಪಡೆಯುತ್ತಿದ್ದಾರೆ ಶಾಸಕರು, ಸಚಿವರು, ಎಂಪಿಗಳು ಮಾತ್ರವಲ್ಲ ಅಧಿಕಾರಿ ಹುದ್ದೆಗಳಲ್ಲಿ ಕೂಡ ಅವರದೇ ಕುಟುಂಬದವರು ಆ ಹುದ್ದೆಗಳನ್ನು ಅಲಂಕರಿಸುವ ಸ್ಥಿತಿ ನಿರ್ಮಾಣವಾಗಿದೆ. ಸಮಾಜದಲ್ಲಿ ಈ ತಾರತಮ್ಯಗಳನ್ನು ಹೋಗಲಾಡಿಸಿ ನಿಜವಾದ ಅರ್ಹರಿಗೆ ಮೀಸಲಾತಿ ಸಿಗುವಂತೆ ಮಾಡಬೇಕಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಸಲ್ಲಿಸಲಾಗುತ್ತದೆ ಎಂದರು.



