ರಾಣೆಬೆನ್ನೂರು: ಮನೆ ಬಾಡಿಗೆ ವಸೂಲಿ ಮಾಡಿಕೊಡಲು 40 ಸಾವಿರ ಲಂಚ ಪಡೆಯುವಾಗ ರಾಣೆಬೆನ್ನೂರಿನ ಪಿಎಸ್ ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಪಿಎಸ್‌ಐ ಸುನೀಲ ತೇಲಿ ಹಾಗೂ ಕಾನ್‌ಸ್ಟೆಬಲ್ ಸಚಿನ್ ಓಲೇಕಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ. ಇವರ ಜತೆಗೆ ಹಣ ಒಡೆಯಲು ಸಹಕರಿಸಿದ ಉಡುಪಿ ಟಿಸ್ಟಾಲ್ ಮಾಲೀಕ ಸಂತೋಷ್ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ದೂರುದಾರ ಸಿದ್ಧೇಶ್ವರ ನಗರದ ಅಹ್ಮದ್ ನೂರ ಅಹ್ಮದ್‌ಸಾಬ್ ಊದಗಟ್ಟಿ ಅವರಿಗೆ ಅಣ್ಣನ ಪತ್ನಿ ರೌನಕ್ ಖಾನ್ ಅವರೊಂದಿಗೆ ಮನೆ ಬಾಡಿಗೆ ವಿಚಾರದಲ್ಲಿ ವಿವಾದವಿತ್ತು. ರೌನಕ್ ರಾಣೆಬೆನ್ನೂರು ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಹಿಂಪಡೆಯಲು ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 40 ಸಾವಿರ ಹಣ ಕೊಡಲು ಒಪ್ಪಿಕೊಂಡು ಲಂಚದ ಹಣವನ್ನು ಆರೋಪಿ ಪರವಾಗಿ ಟಿ ಸ್ಟಾಲ್ ಮಾಲೀಕನ ಮೂಲಕ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದರು.



