ದಾವಣಗೆರೆ: ಮಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಕೂಡಲೇ ಭೇಟಿ ನೀಡಿ, ತಕ್ಷಣ ಸರ್ಕಾರದ ಪರಿಹಾರ ವಿತರಿಸಬೇಕು. ಪರಿಹಾರ ನೀಡಲು ವಿಳಂಬ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ. ಆಗಸ್ಟ್ 15ರ ಒಳಗೆ ಎಲ್ಲರಿಗೂ ಪರಿಹಾರ ವಿತರಿಸಿ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಚೇರಿಯಲ್ಲಿ ಕುಳಿತು ಅಂದಾಜು ಮಾಡದೇ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ಇನ್ನೂ ಸಭೆಗೆ ಬಾರದ ಬೆಸ್ಕಾಂ, ಮೀನುಗಾರಿಕೆ ಸಹಿತ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ 106 ರಷ್ಟು ಅಧಿಕ ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 381, ದಾವಣಗೆರೆ 175, ಹರಿಹರ 173, ಹೊನ್ನಾಳಿ 216, ಜಗಳೂರು 161 ಹಾಗೂ ನ್ಯಾಮತಿಯಲ್ಲಿ 205 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ವರೆಗೆ ಪ್ರತಿ ಮನೆಯಲ್ಲಿಯು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಈ ವೇಳೆ ಧ್ವಜ ಸಂಹಿತೆಯಂತೆ ಹಾರಿಸಲು ಮತ್ತು ಇಳಿಸಿಲು ಕ್ರಮ ಕೈಗೊಳ್ಳಬೇಕು. ಎಲ್ಲೂ ಅಪವಾದ ಬಾರದಂತೆ ನಿಯಮ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಆರ್.ಬಿ. ಬಸರಗಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.



