ಬೆಂಗಳೂರು: ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,835 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರ 3,407 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಅನುಮತಿ ನೀಡಿತ್ತು. ಈ ವರ್ಷ 2,832 ಉಪನ್ಯಾಸಕ ಹುದ್ದೆ ಖಾಲಿಯಿದ್ದರೂ, ಕಾಯಂ ಉಪನ್ಯಾಸಕರಿಗೆ ಸ್ವಲ್ಪ ಕಾರ್ಯಭಾರ ಹೆಚ್ಚಿಸಿ, 1835 ಹುದ್ದೆಗಳಿಗೆ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಪಿಯು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. 2021ನೇ ಸಾಲಿನ ಫೆಬ್ರವರಿ ತಿಂಗಳಿಂದ ಮಾಸಿಕ 9 ಸಾವಿರ ರೂ. ಗೌರವಧನದ ಆಧಾರದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.



