ಬೆಂಗಳೂರು: ಸಿಎಂ ಯಡಿಯೂರಪ್ಪ ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಿದ್ಧಾರೆ ಎಂದು ರಾಜ್ಯಪಾಲರು ಹಾಗೂ ಹೈಕಮಾಂಡ್ ಗೆ ದೂರು ನೀಡಿದ ಕೆಎಸ್ ಈಶ್ವರಪ್ಪ ವಿರುದ್ಧವೇ ಬಿಜೆಪಿ ಶಾಸಕರು ಹೈಕಮಾಂಡ್ ಗೆ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ಧಾರೆ.
ಈ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಏಳು ಶಾಸಕರು, ಈಶ್ವರಪ್ಪ ವಿರುದ್ಧ ಕಿಡಿಕಾರಿದರು. ಸಿಎಂ ಯಡಿಯೂರಪ್ಪ ಅನುದಾನ ನೀಡಿಕೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ.ತಮಗೆ ಅನ್ಯಾಯವಾಗಿದ್ದರೆ ಚರ್ಚಿಸುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅವಕಾಶವಿದೆ. ಆದರೆ ಈ ಸಭೆಯಲ್ಲಿ ಯಾವುದೇ ವಿಷಯ ಪ್ರಸ್ತಾಪಿಸದೆ ನೇರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನವನ್ನು ಪಕ್ಷಾತೀತವಾಗಿ ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಸಿಎಂ ಬಿಎಸ್ ವೈ ತಪ್ಪೇನಿದೆ ? ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಚಿವ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದರು. ಈಗ ಸಿಎಂ ವಿರುದ್ಧವೇ ರಾಜ್ಯಪಾಲರಿಗೆ, ಬಿಜೆಪಿ ಉಸ್ತುವಾರಿಗೆ ದೂರು ನೀಡಿ ಪಕ್ಷಕ್ಕೆ ಮುಜುಗರ ತರುವಂತ ಕೆಲಸ ಮಾಡಿದ್ದಾರೆ. ಈಶ್ವರಪ್ಪ ಬೇಕಾಬಿಟ್ಟಿ ಅನುದಾನ ಕೊಟ್ಟಿದ್ದಾರೆ. ಇದಕ್ಕೆ ನಮ್ಮ ಬಳಿ ದಾಖಲೆ ಇದೆ. ಅನುದಾನ ನೀಡಿಕೆಯಲ್ಲಿ ಈಶ್ವರಪ್ಪ ತಾರತಮ್ಯ ಮಾಡಿದ್ದಾರೆ. ಸಿಎಂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡದೆ ನೀಡಿದ್ದಾರೆ. ಈಶ್ವರಪ್ಪ ವಿರುದ್ಧ 47 ಶಾಸಕರ ಸಹಿ ಸಂಗ್ರಹಿಸಲಾಗಿದ್ದು, ಹೈಕಮಾಂಡ್ ಗೆ ದೂರು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಹೇಶ್ ಕುಮಟಳ್ಳಿ, ಪರಣ್ಣ ಮುನವಳ್ಳಿ, ಮಹದೇವಪ್ಪ ಯಾದವಾಡ, ಅರುಣ್ ಕುಮಾರ್ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.



