ಬೆಂಗಳೂರು: ಮುಂಬರು ಲೋಕಸಭೆ ಚುನಾವಣೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಶಿವಮೊಗ್ಗದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಇದೀಗ ಇದೇ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಶಾಮನೂರು ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಶಿವಮೊಗ್ಗದಲ್ಲಿ ಮಾತ್ರ ಈ ಸಲ ಕಾಂಗ್ರೆಸ್ ಪಕ್ಷವೇ ಗೆಲ್ಲೋದು ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿಜೆಪಿ ಸಂಸದರನ್ನು ಗೆಲ್ಲಿಸುವಂತೆ ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ಕರೆ ನೀಡಿದ್ದಾರೆಂದು ಕೇಳಿದೆ. ಅದರ ಬಗ್ಗೆ ಮಾಹಿತಿ ಇಲ್ಲ. ಅವರು ಪಕ್ಷದ ವೇದಿಕೆಯಲ್ಲಿ ಹೇಳಿಲ್ಲ ಅನ್ನಿಸುತ್ತದೆ. ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ ಶಾಮನೂರು ಉಚ್ಚಾಟಿಸಲಿ; ಕಾಂಗ್ರೆಸ್ ಜೀವಂತವಾಗಿದ್ದರೆ ಮೊದಲು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಬೇಕು ಎಂದು ಎಂಎಲ್‌ಸಿ ಹೆಚ್ ವಿಶ್ವನಾಥ್ ಅವರು ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದಾರೆ.
ಬೆಕ್ಕಿನ ಕಲ್ಮಠದಲ್ಲಿ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಗುರು ಬಸವಶ್ರೀ ಪ್ರದಾನ ಸಮಾರಂಭದಲ್ಲಿ ಗುರು ಬಸವಶ್ರೀ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿ ಶಾಮನೂರು ಶಿವಶಂಕರಪ್ಪ, ಅಭಿವೃದ್ಧಿ ಕೆಲಸಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವುದನ್ನು ಗಮನಿಸಿದ್ದು, ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ, ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿರುವ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಅಭಿಪ್ರಾಯಪಟ್ಟರು.
ಬಿ.ವೈ.ರಾಘವೇಂದ್ರ ಅವರಂತಹ ಲೋಕಸಭೆ ಸದಸ್ಯರನ್ನುಪಡೆದ ನೀವೇ ಧನ್ಯರು. ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿ ಮುನ್ನಡೆಯುತ್ತಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಆಗಬೇಕಿರುವುದು ಮೊದಲ ಆದ್ಯತೆ. ಜನರ ಅಭಿಲಾಷೆಯಂತೆ ಕೆಲಸ ಮಾಡಿರುವ ಲೋಕಸಭಾ ಸದಸ್ಯರನ್ನು ಬರುವ ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲಿಸಬೇಕು ಎಂದು ಕರೆ ನೀಡಿದರು.ವೀರಶೈವ ಲಿಂಗಾಯತರಲ್ಲಿ ಅನೇಕ ಒಳ ಪಂಗಡಗಳಿವೆ, ಅವುಗಳು ದೂರವಾಗಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಆಗ ಐಕ್ಯತೆ ಮೂಡುತ್ತದೆ ಎಂದರು.