ಬೆಂಗಳೂರು: ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಡಾ.ಭರತ್ ಶೆಟ್ಟಿ .ವೈ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿ ಇದ್ದು, ಈ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರೊನಾ ಕಾರಣದಿಂದ ಇದು ವಿಳಂಬವಾಗಿದೆ. ಮತ್ತೊಮ್ಮೆ ಮನವಿ ಮಾಡಿ ಆದಷ್ಟು ಶೀಘ್ರ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮುಖ್ಯ ಪಶು ವೈದ್ಯಾಧಿಕಾರಿ(ಆಡಳಿತ), 39 ಮುಖ್ಯ ಪಶು ವೈದ್ಯಾಧಿಕಾರಿ, 10 ಹಿರಿಯ ಪಶು ವೈದ್ಯಾಧಿಕಾರಿ, 17 ಪಶು ವೈದ್ಯಾಧಿಕಾರಿ ಸೇರಿದಂತೆ ಒಟ್ಟು 72 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಮಂಜೂರಾ ಗಿರುವ ಹುದ್ದೆಗಳಲ್ಲಿ 33 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 39 ಹುದ್ದೆಗಳು ಖಾಲಿಯಿವೆ. ಸದ್ಯಕ್ಕೆ ಕೋವಿಡ್ ಕಾರಣ ಹೊರಗುತ್ತಿಗೆ ಆಧಾರದ ಮೇಲೆ ಪಶು ವೈದ್ಯರನ್ನು ನೇಮಕ ಮಾಡಿಕೊಳ್ಳುವ ಪ್ರಸ್ತಾವನೆ ಇಲ್ಲ ಎಂದು ಹೇಳಿದರು. ಎಲ್ಲೆಲ್ಲಿ , ಯಾವ ಜಿಲ್ಲೆಗಳಲ್ಲಿ ಹುದ್ದೆಗಳಿವೆಯೋ ಅಂತಹ ಕಡೆ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಸೂಚಿಸದಲಾಗಿದೆ ಎಂದು ತಿಳಿಸಿದರು.



