ಡಿವಿಜಿ ಸುದ್ದಿ, ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಇಂದು ಬೆಳ್ಳಂಬೆಳಗೆ ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ನಡೆಸುತ್ತಿದ್ದಾರೆ.
ವಿನಯ್ ಕುಲಕರ್ಣಿಯನ್ನು ಉಪನಗರ ಠಾಣೆಗೆ ಕರೆಯಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ಸುಧೀರ್ಘ ವಿಚಾರಣೆ ನಡೆಸಿದ್ದಾರೆ. 2016ರ ಜೂನ್ 15ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಪಾತ್ರವಿದೆ ಎಂದು ಯೋಗೀಶ್ ಗೌಡ ಕುಟುಂಬ ಆರೋಪಿಸಿತ್ತು. ಕಳೆದ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಸರಿಯಾಗಿ ತನಿಖೆ ನಡೆಸಿರಲಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಕುಟುಂಬ ಸದಸ್ಯರು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು. ಇದೀಗ ಸಿಬಿಐ ವಿನಯ್ ಕುಲಕರ್ಣಿ ವಿಚಾರಣೆ ಆರಂಭಿಸಿದೆ.
ವಿನಯ ಕುಲಕರ್ಣಿ, ಸೋದರ ವಿಜಯ ಕುಲಕರ್ಣಿ ಜೊತೆಗೆ ಅವರ ಆಪ್ತ ಶ್ರೀ ಪಾಟೀಲ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ವಿಚಾರಣೆ ನಡೆಯುತ್ತಿರುವ ಉಪನಗರ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.



