ಡಿವಿಜಿ ಸುದ್ದಿ, ದಾವಣಗೆರೆ: ಸಿಎಂ ಯಡಿಯೂರಪ್ಪ ಒಂದು ಮಾತು ಹೇಳ್ತಿದ್ರು, ಕೊಟ್ಟ ಕುದುರೆ ಓಡಿಸದವನು ವೀರನೂ ಅಲ್ಲ, ಧೀರನೂ ಅಲ್ಲ ಅಂತಾ. ಹಾಗೆಯೇ ಕೇಂದ್ರದಲ್ಲಿ ಸಚಿವ ಸ್ಥಾನದ ಸಿಕ್ಕರೆ ಕುದುರೆ ಓಡಿಸುತ್ತೇನೆ. ಸಿಗದಿದ್ದರೆ, ಲೋಕಸಭೆ ಸದಸ್ಯನಾಗಿ ಮುಂದುವರೆಯುತ್ತೇನೆ ಎಂದು ಸಂಸದ ಜಿಎಂ ಸಿದ್ಧೇಶ್ವರ್ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಶಾಂತಿ ಸಾಗರ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಯೋಗನೂ ಇಲ್ಲ. 2004ರಲ್ಲಿ ಚುನಾವಣೆ ಸ್ಪರ್ಧಿಸುವಾಗಲೂ ಬೇಡ ಎಂದಿದ್ದೆ, 2014ರಲ್ಲಿ ಕೇಂದ್ರ ಸಚಿವ ಸ್ಥಾನವನ್ನೂ ಕೂಡ ಬಯಸಿರಲಿಲ್ಲ. ಹೀಗಾಗಿ ಈಗ ಸಚಿವ ಸ್ಥಾನದ ಕುದುರೆ ಕೊಟ್ಟರೆ ಓಡಿಸುತ್ತೇನೆ. ಸಿಗದಿದ್ದರೆ ಲೋಕಸಭಾ ಸದಸ್ಯನಾಗಿ ಮುಂದುವರೆಯುತ್ತೇನೆ ಎಂದರು.
ಸಜ್ಜನ ರಾಜಕಾರಣಿಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು, ನಿಧನ ಹೊಂದಿದ್ದು ಬಹಳ ಆಶ್ಚರ್ಯವಾಯಿತು. ಅವರಿಗೆ ಯಾವುದೇ ರೋಗ ಇರಲಿಲ್ಲ. ಕೊರೊನಾ ಯಾವ ರೀತಿ ಬರುತ್ತೇ ಎಂದು ಹೇಳಲಿಕ್ಕೆ ಆಗುವುದಿಲ್ಲ. ಜ್ವರ ಬಂದಿದೆ, ಅದೇನು ಮಾಡುತ್ತೇ ಬಿಡು ಎಂದು ಕೊರೊನಾ ಬಗ್ಗೆ ಬಹಳ ಉದಾಸೀನ ಮಾಡಿದ ಅಂಗಡಿ, ದೆಹಲಿ ಆಸ್ಪತ್ರೆಗೆ ಸೇರಿ 12 ದಿನದಲ್ಲಿ ಸಾವನ್ನಪ್ಪಿದ್ದು ನೋವಿನ ಸಂಗತಿ. ಹೀಗಾಗಿ ಜನಪ್ರತಿನಿಧಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ನಾನು ಕೂಡ ಕಲಾಪದ ನಂತರ ದೆಹಲಿ ಕಡೆ ಹೋಗಿಲ್ಲ ಎಂದರು.



