ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನಾಳೆ (ಜೂನ್ 3) ನಗರಕ್ಕೆ ಆಗಮಿಸಲಿದ್ದು, ಅದ್ಧೂರಿಯಾಗಿ ಸ್ವಾಗತಿಸಲು ಕಾಂಗ್ರೆಸ್ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ.
3ನೇ ಸಲ ಸಚಿವರಾಗಿ ಆಯ್ಕೆಯಾದ ಅವರನ್ನು ಅಂದು ಮಧ್ಯಾಹ್ನ 3ಕ್ಕೆ ಜಿಲ್ಲಾ ಪಂಚಾಯಿತಿ ಮುಂಭಾಗ ಸ್ವಾಗತಿಸಿ, ನಗರದ ವಿವಿಧೆಡೆ ಬೈಕ್ ರ‍್ಯಾಲಿ ನಡೆಸಿ ವಿವಿಧೆಡೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಿಂದ ಆರಂಭವಾಗುವ ಮೆರವಣಿಗೆ ಗಣೇಶ ದೇವಸ್ಥಾನ, ಹದಡಿ ರಸ್ತೆ, ಐ.ಟಿ.ಐ. ಕಾಲೇಜ್ ಮುಂಭಾಗದಿಂದ 60 ಅಡಿ ರಸ್ತೆಯ ಮುಖಾಂತರ ನಿಟುವಳ್ಳಿ ದುರ್ಗಾಂಭಿಕ ಸರ್ಕಲ್‌ಗೆ ಬರಲಿದೆ. ಆ ಬಳಿಕ ಆರ್.ಎಸ್. ಶೇಖರಪ್ಪನವರ ಮನೆ ಮುಂಭಾಗ, ಕೊಂಡಜ್ಜಿ ಬಸಪ್ಪ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕ ಜಯದೇವ ವೃತ್ತಕ್ಕೆ ಆಗಮಿಸಲಿದೆ. ಮಹಾನಗರ ಪಾಲಿಕೆ ಕಚೇರಿ ಮುಂಭಾಗದಿಂದ ಅರುಣ ಚಿತ್ರಮಂದಿರ, ರೈಲ್ವೆಗೇಟ್ ಮುಖಾಂತರ ಹೊಂಡದ ಸರ್ಕಲ್, ದುರ್ಗಾಂಬಿಕಾ ದೇವಸ್ಥಾನ, ಶಿವಾಜಿ ವೃತ್ತ, ಹಗೇದಿಬ್ಬ ಸರ್ಕಲ್, ಅಜಾದ್‌ನಗರ ಮುಖ್ಯರಸ್ತೆ, ಅರಳಿಮರ ಸರ್ಕಲ್, ವೆಂಕಟೇಶ್ವರ ಸರ್ಕಲ್‌ಗೆ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಶಾಸಕ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಶಾಸಕರಾದ ಕೆ.ಎಸ್. ಬಸವಂತಪ್ಪ, ಶಿವಗಂಗಾ ಬಸವರಾಜ್, ಡಿ.ಜಿ.ಶಾಂತನಗೌಡ, ದೇವೆಂದ್ರಪ್ಪ ಹಾಗೂ ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಹರಿಹರದ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್, ಹರಪನಹಳ್ಳಿಯ ಅರಸೀಕೆರೆ ಕೊಟ್ರೇಶ್ ಭಾಗವಹಿಸುವರು ಎಂದು ಹೇಳಿದರು.