ದಾವಣಗೆರೆ: ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಬಗ್ಗೆ ನಾನು ಹೇಳಿದ್ದು ಸುಳ್ಳಾದ್ರೆ, ರಾಜಕೀಯ ನಿವೃತ್ತ ತೆಗೆದುಕೊಳ್ಳುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಎಲ್ಲದಕ್ಕೂ ತಲೆ ಆಡಿಸಿದಂತೆ ನಾವು ಹಾಗೆ ಮಾಡೋದಕ್ಕೆ ಆಗುತ್ತಾ..? ಅನ್ಯಾಯ ಸಹಿಸಿಕೊಳ್ಳಬೇಕೇನ್ರೀ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಅನ್ಯಾಯವಾದ್ರೆ ಪ್ರತಿಭಟಿಸಬಾರದಾ..?ಯಡಿಯೂರಪ್ಪ ಬಾಯಿ ಮುಚ್ಚಿಕೊಂಡು ಇದ್ರೆ, ನಾವು ಬಾಯಿ ಮುಚ್ಚಿಕೊಂಡು ಇರಬೇಕಾ..? ಕೇಂದ್ರ ಸರ್ಕಾರಕ್ಕೆ ನಾವು 100 ರೂಪಾಯಿ ತೆರಿಗೆ ಕೊಟ್ರೆ, ಅವರು ನಮಗೆ ಕೇವಲ 12 ರಿಂದ 13 ರೂಪಾಯಿ ಮಾತ್ರ ಅನುದಾನ ರೂಪದಲ್ಲಿ ಕೊಡುತ್ತಿದ್ದಾರೆ.ಅದು ಇಡೀ ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೂ, ವಂಚನೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಬಿಜೆಪಿ ಮುಖಂಡರು ಈ ಬಗ್ಗೆ ಮಾತನಾಡಲಿಲ್ಲ. ಯಡಿಯೂರಪ್ಪ, ಆರ್. ಅಶೋಕ, ಬಸವರಾಜ್ ಬೊಮ್ಮಾಯಿ, ಬಿ. ವೈ. ವಿಜಯೇಂದ್ರ ಸೇರಿ ಯಾರು ಈ ಬಗ್ಗೆ ಮಾತನಾಡುತ್ತಿಲ್ಲ. ಅವ್ರು ಅನುದಾನ ತಮ್ಮ ಜೇಬಿನಿಂದ ಕೊಡೋದಿಲ್ಲ. ನಾನು ಸುಳ್ಳು ಹೇಳುತ್ತಿದ್ದೇನೆಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತಗೆದುಕೊಳ್ಳುತೇನೆಂದು ಸವಾಲು ಹಾಕಿದರು.
ಬರ ಸಮಸ್ಯೆ ನಿವಾರಿಸಲು 860 ಕೋಟಿ ರೂಪಾಯಿ ಎಲ್ಲಾ ಡಿಸಿಗಳ ಬಳಿ ಇದೆ. ಪ್ರತಿ ಜಿಲ್ಲೆಗೂ 25 ರಿಂದ 30 ಕೋಟಿ ರೂಪಾಯಿ ಇದೆ. ಕುಡಿಯುವ ನೀರು, ಮೇವಿಗೆ ಸಮಸ್ಯೆ ಹೋಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.



