ದಾವಣಗೆರೆ: ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ. ಅವರು ಅವರದ್ದೇ ಲೆಕ್ಕಾಚಾರ, ಶಕ್ತಿ ಹೊಂದಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮತ್ತು ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕುಳಿತಿದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಕಾಂಗ್ರೆಸ್‌ನ ಮುಖಂಡರು ಬಿಜೆಪಿಯ ಕೆಲ ಮುಖಂಡರನ್ನು ಸಂಪರ್ಕ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಮ್ಮ ಯಾವ ಶಾಸಕರು ಇದಕ್ಕೆ ಅವಕಾಶ ಮಾಡಿಕೊಡದೆ, ಆತ್ಮವಿಶ್ವಾದಿಂದ ಮುನ್ನಡೆಯಬೇಕಾಗಿದೆ. ಬಿಜೆಪಿಯನ್ನು 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಾವು ನೀವೆಲ್ಲ ಸೇರಿ ಮಾಡಬೇಕಾಗಿದೆ ಎಂದರು.
ಮುಂಬರುವ ಹಾನಗಲ್, ಸಿಂಧಗಿ ವಿಧಾನಸಬೆ ಉಪಚುನಾವಣೆಯನ್ನು ಗೆಲ್ಲದಿದ್ದರೆ ಅದು ಮುಂದೆ ರಾಜ್ಯದಲ್ಲಿ ಯಾವ ಸಂದೇಶ ಹೋಗಬಹುದು ಎಂಬುದನ್ನು ಯೋಚನೆ ಮಾಡಬೇಕಾಗಿದೆ.ಉಪಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್‌ಗೆ ದೊಡ್ಡ ಪಾಠ ಕಲಿಸಿದಂತಾಗುತ್ತದೆ. ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆ ನಮ್ಮ ಮುಂದಿರುವ ದೊಡ್ಡ ಅಗ್ನಿಪರೀಕ್ಷೆ. ಈ ಬಗ್ಗೆ ಶ್ರಮವಹಿಸಬೇಕಾಗಿದೆ ಎಂದರು.
ನನ್ನ ಪ್ರವಾಸದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ, ನಾನು ಒಬ್ಬನೇ ಪ್ರವಾಸ ಮಾಡಲು ಸಾಧ್ಯವೇನು? ನಮ್ಮ ಜತೆ ಶಾಸಕರು, ಸಂಸದರು. ನಾಯಕರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಎಲ್ಲರೂ ಸಹಜವಾಗಿ ಇರುತ್ತಾರೆ. ನಾಲ್ಕಾರು ತಂಡಗಳ ಮೂಲಕ ಪ್ರವಾಸ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಇನ್ನು ಮುಂದೆ ಮಂದಿರಗಳನ್ನು ಕೆಡವಲು ಅವಕಾಶ ಕೊಡುವುದಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ. ಮಂದಿರಗಳನ್ನು ಉಳಿಸಲು ಅಗತ್ಯ ಎಲ್ಲ ಕಾನೂನುಕ್ರಮ ಕೈಗೊಳ್ಳುತ್ತೇವೆ. ಜತೆಗೆ ಅಗತ್ಯಬಿದ್ದರೆ ಸುಪ್ರಿಂ ಕೋರ್ಟ್‌ಗೂ ಮೇಲ್ಮನವಿ ಮಾಡಲಾಗುವುದು. ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ.