ನವದೆಹಲಿ: ಇಡೀ ದೇಶದಲ್ಲಿ 2021ನೇ ಸಾಲಿನ ಮುಂಗಾರು ಸಾಮಾನ್ಯವಾಗಿ ಇರಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ವರ್ಷ ದೀರ್ಘಾವಧಿಯ ಸರಾಸರಿಯ 98% ರಷ್ಟು ಸಾಮಾನ್ಯ ಮುಂಗಾರು ಮಳೆಯಾಗಲಿದೆ. ಐಎಂಡಿ 96% ರಿಂದ 104% ನಡುವಿನ ಮಳೆಯನ್ನು ಸಾಮಾನ್ಯ ಎಂದು ಪರಿಗಣಿಸುತ್ತದೆ.
ಈ ಕುರಿತಂತೆ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವ್ ಅವರು ಮಾಹಿತಿ ನೀಡಿದ್ದು. ಮಾನ್ಸೂನ್ ನ ದೀರ್ಘಾವಧಿಯ ಸರಾಸರಿ ಶೇಕಡಾ 98ರಷ್ಟಿರುತ್ತದೆ ಎಂದಿದ್ದಾರೆ. ಸರಾಸರಿಗಿಂತ ಸತತ ಎರಡು ವರ್ಷ ಹೆಚ್ಚಿನ ಮಳೆಯ ನಂತರ, ಈ ವರ್ಷ ನಾವು ಸಾಮಾನ್ಯ ಮಾನ್ಸೂನ್ ಮಳೆಯನ್ನು ಪಡೆಯುವ ಸಾಧ್ಯತೆಯಿದೆ ೆಂದು ತಿಳಿಸಿದ್ದಾರೆ. ದೇಶಕ್ಕೆ ಇದು ನಿಜವಾಗಿಯೂ ಒಳ್ಳೆಯ ಸುದ್ದಿಯಾಗಿದ್ದು, ಇದರಿಂದ ಕೃಷಿ ಉತ್ಪಾದನೆ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಜೂನ್ ಮೊದಲ ವಾರದಲ್ಲಿ ದಕ್ಷಿಣ ಭಾರತದ ಕೇರಳದಲ್ಲಿ ಮೊದಲ ಮಳೆಯಾಗಲಿದ್ದು, ಸೆಪ್ಟೆಂಬರ್ ವೇಳೆಗೆ ರಾಜಸ್ಥಾನದಲ್ಲಿಯೂ ಮಳೆಯಾಗಲಿದೆ. ನಿರೀಕ್ಷೆಯಂತೆ ಕಳೆದ ವರ್ಷ ಕೂಡ ಜೂನ್ 1 ರಂದು ಕೇರಳ ಕರಾವಳಿಯಲ್ಲಿ ಮುಂಗಾರು ಅಪ್ಪಳಿಸಿತ್ತು.



