ಮೈಸೂರು: ಲೋಕಸಭಾ ಕಲಾಪ ನಡೆಯುತ್ತಿರುವ ವೇಳೆ ಏಕಾಏಕಿ ಇಬ್ಬರು ಯುವರು ಸದನದೊಳಗೆ ನುಗ್ಗಿ, ಅನಿಲ ಹೊರಸೂಸುವ ವಸ್ತು ಎಸೆದು ಆತಂಕ ಸೃಷ್ಠಿಸಿದ್ದರು. ಈ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಮೈಸೂರಿನ ಯುವಕನಾಗಿದ್ದಾನೆ.
ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ನುಗ್ಗಿದ ಯುವಕರಾದ ಸಾಗರ್ ಹಾಗೂ ಮನೋರಂಜನ್ ಆತಂಕ ಸೃಷ್ಠಿಸಿದ್ದರು. ಮನೋರಂಜನ್ ಮೈಸೂರು ಮೂಲದವನು ಎಂದು ತಿಳಿದು ಬಂದಿದೆ. ಇನ್ನು ಇತ್ತ ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಮನೋರಂಜನ್ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮಗ ಬಿಇ ಮುಗಿಸಿದ್ದನು. ದೆಹಲಿ, ಬೆಂಗಳೂರಿಗೆ ಓಡಾಡುತ್ತಿದ್ದ. ನನ್ನ ಪುತ್ರ ಯಾಕೆ ಈ ರೀತಿ ಮಾಡಿದ್ದಾನೆ ಎಂದು ಗೊತ್ತಿಲ್ಲ. ಆತ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಎಂದಿದ್ದಾರೆ.
ಇವರಿಬ್ಬರಲ್ಲಿ ಒಬ್ಬರು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿಯಿಂದ ಪಾಸ್ ಪಡೆದುಕೊಂಡು ಸಂಸತ್ತಿನೊಳಗೆ ಬಂದಿದ್ದರು. ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.



