ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಇದರ ಪರಿಣಾಮವಾಗಿ ನದಿಯಲ್ಲಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150 ಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಮಾತನಾಡಿದ್ದು, ಪ್ರವಾಹದ ಎದುರಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಪ್ರವಾಹ ಪೀಡಿತ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಸೇನಾ ಪಡೆಗಳನ್ನು ದೆಹಲಿಯಿಂದ ವಿಮಾನದಲ್ಲಿ ರವಾನಿಸಲಾಗುತ್ತಿದೆ.
ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರ ಹಿಮಪಾತ ಉಂಟಾಗಿ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ ಮತ್ತು ಅದರ ದಡದಲ್ಲಿ ವಾಸಿಸುವ ಜನರ ಜೀವಕ್ಕೆ ಅಪಾಯ ಉಂಟಾಗಿದ್ದು, ಬೃಹತ್ ವಿನಾಶದ ಭಯ ಉಂಟಾಗಿದೆ.