ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬ್ಯಾಂಕಿನ ವಿವಿಧ ಡೆಬಿಟ್ ಕಾರ್ಡ್ ಗಳ ವಾರ್ಷಿಕ ನಿರ್ವಹಣಾ ಶುಲ್ಕ ಏರಿಕೆ ಮಾಡಲಾಗಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ದರ ಪ್ರತಿ ಕಾರ್ಡ್ ಗೆ 75 ರೂ. ಏರಿಕೆ ಮಾಡಲಾಗಿದೆ. ಪರಿಷ್ಕೃತ ನಿರ್ವಹಣಾ ಶುಲ್ಕ 2024ರ ಏಪ್ರಿಲ್ 1ರಿಂದ ಜಾರಿಯಾಗಲಿದೆ.
ಎಸ್.ಬಿ.ಐ. ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್ ಗಳ ಶುಲ್ಕವನ್ನು ಕೂಡ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಈ ಕಾರ್ಡುಗಳಿಗೆ 125 ರೂ. ಶುಲ್ಕ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ. ಈ ದರ ಏಪ್ರಿಲ್ 1ರಿಂದ ವಾರ್ಷಿಕ 200 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕು.
ಯುವ, ಗೋಲ್ಡ್, ಕಾಂಬೋ ಡೆಬಿಟ್ ಕಾರ್ಡ್, ಮೈ ಕಾರ್ಡ್ ನಿರ್ವಹಣಾ ಶುಲ್ಕವನ್ನು 175 ರೂ.ನಿಂದ 250 ರೂ.ಗೆ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ GST ಅನ್ವಯವಾಗಲಿದೆ.
ಎಸ್‌ಬಿಐ ಪ್ಲಾಟಿನಮ್ ಡೆಬಿಟ್ ಕಾರ್ಡ್ ಗಳ ಶುಲ್ಕ 250 ರೂ. ನಿಂದ 325 ರೂ.ಗೆ ಹೆಚ್ಚಿಸಿದ್ದು, ಜಿ.ಎಸ್.ಟಿ. ಪಾವತಿಸಬೇಕಿದೆ.
ಪ್ರೈಡ್ ಪ್ರೀಮಿಯಂ, ಬ್ಯುಸಿನೆಸ್ ಡೆಬಿಟ್ ಕಾರ್ಡ್ ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು 350 ರೂ.ನಿಂದ 425 ರೂ.ಗೆ ಹೆಚ್ಚಳ ಮಾಡಲಾಗಿದ್ದು, ಎಲ್ಲಾ ಶುಲ್ಕಗಳಿಗೂ ಪ್ರತ್ಯೇಕ ಜಿಎಸ್‌ಟಿ ಅನ್ವಯವಾಗುತ್ತದೆ.
ತನ್ನ ವಾರ್ಷಿಕ ನಿರ್ವಹಣಾ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡುವುದರ ಹೊರತಾಗಿ, ಡೆಬಿಟ್ ಕಾರ್ಡ್ ಹೊಂದಿರುವವರಿಗೆ ವಿತರಣಾ ಶುಲ್ಕಗಳು ಮತ್ತು ಇತರ ಸೇವಾ ಶುಲ್ಕಗಳಲ್ಲಿ ಬದಲಾವಣೆಗಳನ್ನು SBI ಸೂಚಿಸಿದೆ. ಎಸ್‌ಬಿಐ ಖಾತೆದಾರರು, ಪ್ಲಾಟಿನಂ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು 300 ರೂ. (ಕನಿಷ್ಠ) ಪಾವತಿಸಬೇಕಾಗುತ್ತದೆ, ಆದರೆ ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್‌ಗಳ ವಿತರಣೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಎಸ್‌ಬಿಐ ಖಾತೆದಾರರು ಅಂತರರಾಷ್ಟ್ರೀಯ ವಹಿವಾಟು ಶುಲ್ಕಗಳ ಅಡಿಯಲ್ಲಿ ಎಟಿಎಂಗಳಲ್ಲಿ ವಿಚಾರಣೆಗಾಗಿ ಜಿಎಸ್‌ಟಿ ಜೊತೆಗೆ 25 ರೂ. ಪಾವತಿಸಬೇಕಾಗುತ್ತದೆ. ಇತರ ಅಂತರರಾಷ್ಟ್ರೀಯ ವಹಿವಾಟು ಶುಲ್ಕಗಳು ಎಟಿಎಂ ನಗದು ಹಿಂಪಡೆಯುವ ವಹಿವಾಟುಗಳಿಗೆ ಕನಿಷ್ಠ 100 ರೂ. ಮತ್ತು ವಹಿವಾಟಿನ ಮೊತ್ತದ 3.5% ಅನ್ನು ಒಳಗೊಂಡಿರುತ್ತದೆ. ನಕಲು ಪಿನ್, ಪಿನ್ ರಿಜನರೇಶ್ ಗೆ 50 ರೂ. ಹಾಗೂ ಜಿಎಸ್ಟಿ ವಿಧಿಸಲಾಗುವುದು.



