ನವದೆಹಲಿ: ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಅ.12ರಿಂದ ಹೆಸರು ನೋಂದಣಿಗೆ ಯುವಜನರಿಗೆ ಅವಕಾಶ ಕಲ್ಪಿಸಿದೆ. ಡಿಸೆಂಬರ್ 2ರಿಂದ ಈ ಯೋಜನೆಯು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 5 ಸಾವಿರ ಭತ್ಯೆ ನೀಡಲಾಗುವುದು.
ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ 1.25 ಲಕ್ಷ ಯುವಜನರಿಗೆ ವಿವಿಧ ವೃತ್ತಿ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 800 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಘೋಷಿಸಿತ್ತು. ಮುಂದಿನ ಐದು ವರ್ಷದಲ್ಲಿ ಒಂದು ಕೋಟಿ ಯುವಜನರಿಗೆ ಇಂಟರ್ನ್‌ಶಿಪ್ ನೀಡಲಾಗುತ್ತದೆ. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ www.pminternship.mca.gov.in ಪೋರ್ಟಲ್ ಮೂಲಕ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ 12 ತಿಂಗಳವರೆಗೆ ವೃತ್ತಿ ತರಬೇತಿ ನೀಡಲಾಗುತ್ತದೆ. ಪ್ರತಿ ತಿಂಗಳು 5 ಸಾವಿರ ಭತ್ಯೆ ನೀಡಲಾಗುತ್ತದೆ. ಅಲ್ಲದೆ, ಒಂದು ಬಾರಿಗೆ ಸರ್ಕಾರವು 6 ಸಾವಿರ ಧನಸಹಾಯ ನೀಡಲಿದೆ. 21ರಿಂದ 24 ವರ್ಷದ ಒಳಗಿನ ಯುವಜನರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.



