ನವದೆಹಲಿ : ಭಾರತೀಯ ಸೇನೆಗೆ ಕಳೆದ 132 ವರ್ಷಗಳಿಂದ ಹಾಲು ಪೂರೈಕೆ ಮಾಡಿದ್ದ ಮಿಲಿಟರಿ ಡೈರಿಗಳು ಇನ್ನು ನೆನಪಿನ ಪುಟ ಸೇರಿವೆ. ಇಂದಿನಿಂದ ಹಾಲು ಉತ್ಪಾದನೆ ನಿಲ್ಲಿಸಿದ್ದು, ಇತಿಹಾಸ ಪುಟ ಸೇರಿದಂತಾಗಿದೆ.
ಭಾರತೀಯ ಸೇನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂಬಾಲಾ, ಕೋಲ್ಕತ್ತಾ, ಶ್ರೀನಗರ, ಆಗ್ರಾ, ಪಠಾಣ್‍ಕೋಟ್, ಲಕ್ನೋ, ಮಿರಠ್, ಅಲಹಾಬಾದ್ ಹಾಗೂ ಗುವಾಹಟಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸುಮಾರು 20 ಸಾವಿರ ಎಕರೆ ಜಮೀನಿನಲ್ಲಿ ಹಾಲಿನ ಡೈರಿಗಳಿದ್ದವು. ಇಂತಹ ಡೈರಿಗಳಿಂದ ಕರ್ತವ್ಯ ನಿಭಾಯಿಸುತ್ತಿರುವ ಯೋಧರಿಗೆ ನಿತ್ಯ ಹಾಲು ಪೂರೈಕೆಯಾಗುತ್ತಿತ್ತು.
ಫೆಬ್ರುವರಿ 1, 1889 ರಲ್ಲಿ ಅಂದರೆ ಬ್ರಿಟಿಷರ್ ಆಡಳಿತಾವಧಿಯಲ್ಲಿ ಮಿಲಿಟರಿ ಡೈರಿಗಳನ್ನು ಸ್ಥಾಪಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ವಿಸ್ತರಣೆ ಮಾಡಿ 130 ಡೈರಿಗಳನ್ನು ಸ್ಥಾಪಿಸಲಾಯಿತು. ಯೋಧರಿಗೆ ಆರೋಗ್ಯಯುತ ಹಾಗೂ ಪೌಷ್ಠಿಕ ಹಾಲು ಸರಬರಾಜು ಮಾಡುವ ನಿಟ್ಟಿನಲ್ಲಿ ಈ ಡೈರಿಗಳನ್ನು ತೆರೆಯಲಾಗಿತ್ತು. ಭಾರತೀಯ ಸೇನೆಗೆ ಇದರ ನಿರ್ವಹಣೆ ಕಷ್ಟಕರವಾಗಿದ್ದು, ಈ ಡೈರಿಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಇವತ್ತಿನಿಂದಲೇ ಹಾಲು ಉತ್ಪಾದನಾ ಕೇಂದ್ರದ ಬಾಗಿಲು ಮುಚ್ಚುತ್ತಿವೆ.
ಈ ಬಗ್ಗೆ ಲೆಫ್ಟಿನೆಂಟ್ ಜನರಲ್ ಶಶಾಂಕ್ ಮಿಶ್ರಾ ಮಾತನಾಡಿ , 132 ವರ್ಷದ ಇತಿಹಾಸ ಮಿಲಿಟರಿ ಡೈರಿಗಳು ಇಂದಿನಿಂದ ಕ್ಲೋಸ್ ಆಗುತ್ತಿವೆ. ಫೆ.1,1889 ರಲ್ಲಿ ಅಲಹಾಬಾದ್ ನ ಲ್ಲಿ ಮೊದಲ ಡೈರಿ ಪ್ರಾರಂಭವಾಯಿತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತೆ 130 ಫಾರ್ಮ್ಸ್ ಗಳನ್ನು ತೆರೆಯಲಾಯಿತು. 1970ರಲ್ಲಿ ಭಾರತದಲ್ಲಿ ಉಂಟಾದ ಕ್ಷೀರ ಕ್ರಾಂತಿಯ ಮುಂಚೆಯೇ ಹಾಲು ಉತ್ಪಾದನೆಯಲ್ಲಿ ಮುಂಚೂಣೆಯಲ್ಲಿದ್ದವು. ಇದು ಕೇವಲ ಯೋಧರಿಗೆ ಹಾಲು ಪೂರೈಸುವುದಲ್ಲದೆ, ದೇಶದಲ್ಲಿ ಡೈರಿ ಉದ್ಯಮ ಪ್ರೋತ್ಸಾಹ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.
ಇಂದಿನ ದಿನ ಮಾನಗಳಲ್ಲಿ ಎಲ್ಲೆಡೆ ಹಾಲು ಉತ್ಪಾದನೆಯಾಗುತ್ತಿದೆ. ಹಾಲಿನ ಡೈರಿಗಳಿದ್ದ ಜಾಗವನ್ನು ಸೇನಾ ಕಾರ್ಯಕ್ಕೆ ಬಳಸುತ್ತೇವೆ. ಡೈರಿಯಲ್ಲಿರುವ ಹಸುಗಳನ್ನು ಆಯಾ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ. ಡೈರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಬೇರೆ ಇಲಾಖೆಗಳಲ್ಲಿ ಉದ್ಯೋಗ ಕಲ್ಪಿಸಿದ್ದೇವೆ ಎಂದು ಮಾಹಿತಿ ನೀಡಿದರು.



