ನವದೆಹಲಿ: ಕೋವಿಡ್-19 ಸೋಂಕು ದೇಶದಲ್ಲಿ ನದಿನದಿಂದ ದಿನಕ್ಕೆ ಹೆಚ್ಚಳ ಹಿನ್ನೆಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಾರಿಯ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.
ಈ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.ಕೆಲ ತಂಡಗಳ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿರುವ ಕಾರಣ ಐಪಿಎಲ್ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದರಿಂದ ಸೋಮವಾರ ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್ ನಡುವಣ ಪಂದ್ಯ ಮುಂದೂಡಿಕೆಯಾಗಿತ್ತು. ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ಗೊತ್ತಾಗಿತ್ತು. ಬುಧವಾರ ರಾಜಸ್ಥಾನ್ ರಾಯಲ್ಸ್ ಮತ್ತು ಸಿಎಸ್‌ಕೆ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನೂ ಮುಂದೂಡಲಾಗಿತ್ತು. ಇದೀಗ ಎಲ್ಲ ತಂಡದಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆ ಟೂರ್ನಿ ರದ್ದುಗೊಳಿಸಲಾಗಿದೆ.



