ನವದೆಹಲಿ: ಭೂಮಿ, ವೆಚ್ಚ ಯೋಜನೆ ವೆಚ್ಚ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದ್ದಕ್ಕೆ ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಳಿರುವ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ಭೂಮಿ ನೀಡಲು ಹಾಗೂ ಯೋಜನಾ ವೆಚ್ಚದ ಶೇ 50:50 ವೆಚ್ಚ ಭರಿಸಲು ನಿರಾಕರಿಸಿದ ಕಾರಣಕ್ಕೆ ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ರೈಲ್ವೇ ಯೋಜನೆಗಳಿಗೆ ಅಗತ್ಯವಿರುವ ಒಟ್ಟು 8,969 ಹೆಕ್ಟೇರ್ ಭೂಮಿಯಲ್ಲಿ ಈವರೆಗೆ 5,657 ಹೆಕ್ಟೇರ್ (ಶೇ.63) ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಯೋಜನೆಗಳಿಗೆ ಒಟ್ಟು 3,312 ಹೆಕ್ಟೇರ್ ಭೂಮಿ ವಶಪಡಿಸಿಕೊಳ್ಳುವುದು ಇನ್ನೂ ಬಾಕಿ ಇದೆ ಎಂದು ಹೇಳಿದರು.
ಯೋಜನೆ ವೆಚ್ಚ ಎಷ್ಟು..?
ಹರಿಹರ -ಶಿವಮೊಗ್ಗ (79 ಕಿಮೀ) ರೈಲು ಯೋಜನೆಯನ್ನು ಶೇ.50ರ ಅನುಪಾತದ ಯೋಜನೆಯಡಿ ಮಂಜೂರು ಮಾಡಲಾಗಿತ್ತು. ರಾಜ್ಯ ಸರಕಾರ 832 ಕೋಟಿ ವೆಚ್ಚದಲ್ಲಿ ಯೋಜನೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಂಡು ಒದಗಿಸಬೇಕಿದೆ. ಒಟ್ಟು 488 ಹೆಕ್ಟೇರ್ ಭೂಮಿಯನ್ನು ಒದಗಿಸಲು ರೈಲ್ವೆ ಇಲಾಖೆ ಕರ್ನಾಟಕ ಸರಕಾರವನ್ನು ಕೋರಿತ್ತು. ಆದರೆ, ಈ ವೆಚ್ಚವನ್ನು ಹಂಚಿಕೊಳ್ಳಲು ಮತ್ತು ಉಚಿತವಾಗಿ ಭೂಮಿಯನ್ನು ಒದಗಿಸಲು ಕರ್ನಾಟಕ ಸರಕಾರ ಆಸಕ್ತಿ ತೋರಿಸಿಲ್ಲ. ಈ ಕಾರಣಕ್ಕೆ ಯೋಜನೆ ಸ್ಥಗಿತಗೊಂಡಿದೆ ಎಂದರು.
ರಾಜ್ಯ ಸರಕಾರ 832 ಕೋಟಿ ವೆಚ್ಚದಲ್ಲಿ ಭೂಮಿ ವಶಪಡಿಸಿಕೊಳ್ಳಬೇಕಿತ್ತು. ಆದರೆ, ಸರಕಾರ ಅಸಮರ್ಥತೆ ತೋರಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ. ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ, ವೈಟ್‌ಫೀಲ್ಡ್-ಕೋಲಾರ, ಹಾಸನ-ಬೇಲೂರು ಮಾರ್ಗಗಳು ಸಹ ಸ್ಥಗಿತಗೊಂಡಿವೆ ಎಂದು ತಿಳಿಸಿದರು.



