ಮುಂಬೈ; ದೇಶದಲ್ಲಿ ಟೊಮೆಟೊ, ಈರುಳ್ಳಿ ಬೆಲೆ ಏರಿಕೆ ಬಳಿಕ, ಇದೀಗ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮಹಾರಾಷ್ಟ್ರದ ಮುಂಬೈ, ನಾಶಿಕ ಹಾಗೂ ಪುಣೆ ಭಾಗಗಳಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 400 ರೂಪಾಯಿ ತಲುಪಿದೆ.
ಪಶ್ಚಿಮ ರಾಜ್ಯಗಳ ಎಪಿಎಂಸಿ ಸಗಟು ಯಾರ್ಡ್‌ಗಳು ಈಗ ಬೆಳ್ಳುಳ್ಳಿಯನ್ನು ಕೆಜಿಗೆ 150-250 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಆ ಪ್ರದೇಶಗಳಲ್ಲಿ ಬೆಳ್ಳುಳ್ಳಿ ರಿಟೇಲ್ ಬೆಲೆಗಳು ಪ್ರತಿ ಕೆಜಿಗೆ 300-400 ರೂಪಾಯಿಗೆ ತಲುಪಿದೆ. ಇದತಿಂದ ಮುಂಬೈ – ಪುಣೆಗಳ ಹೋಟೆಲ್‌ಗಳ ಆಹಾರದ ಮೆನು ಲಿಸ್ಟ್‌ನಿಂದ ಬೆಳ್ಳುಳ್ಳಿ ಪದಾರ್ಥಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.
ನಾಶಿಕ, ಪುಣೆ ಭಾಗಗಳಲ್ಲಿ ಪ್ರತಿಕೂಲ ಹವಾಮಾನ ಪರಿಣಾಮ ಬೆಳೆ ಹಾನಿಯಿಂದಾಗಿ ಮಹಾರಾಷ್ಟ್ರದ ಬೆಳ್ಳುಳ್ಳಿ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಈ ವೇಳೆ ಮುಂಬೈನ ಸಗಟು ವ್ಯಾಪಾರಸ್ಥರು ಗುಜರಾತ್, ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಿಂದ ಬೆಳ್ಳುಳ್ಳಿಗನ್ನು ಹೆಚ್ಚಿನ ಸುಂಕ ಕಟ್ಟಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಳ್ಳುಳ್ಳಿ ರೇಟ್ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ.
ಭಾರತದ ಕೆಲವು ಭಾಗಗಳಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಅಕಾಲಿಕ ಮಳೆಯು ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿ ಬೆಳೆಗಳನ್ನು ನಾಶಮಾಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಕೊರತೆ ಉಂಟಾಗಿದೆ. ಇದರಿಂದ ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ.



