ಬೆಂಗಳೂರು: ಇಡೀ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದಿನಿಂದ ನೂರಕ್ಕೆ ನೂರರಷ್ಟು FASTag ಬಳಕೆ ಜಾರಿಗೆ ಬಂದಿದೆ. ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ಇಂದಿನಿಂದ ದುಪ್ಪಟ್ಟು ಟೋಲ್ ಹಣವನ್ನು ಪಾವತಿಸಬೇಕಾಗುತ್ತದೆ
ಫಾಸ್ಟ್ಯಾಗ್ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಫಾಸ್ಟ್ಟ್ಯಾಗ್ ಇಲ್ಲದಿದ್ದರೆ ಡಬಲ್ ಟೋಲ್ ಕಟ್ಟಬೇಕಾಗುತ್ತಿದೆ. ಮೊದಲು ಫಾಸ್ಟ್ಟ್ಯಾಗ್ ಇಲ್ಲದಿದ್ದರೂ ಟೋಲ್ ಗೇಟ್ನಲ್ಲಿ ಹೋಗುವ ಮತ್ತು ಬರುವ ಟೋಕನ್ ನೀಡಲಾಗುತ್ತಿತ್ತು. ಆದರೆ, ಇದೀಗ ಫಾಸ್ಟ್ಟ್ಯಾಗ್ ಇಲ್ಲದಿದ್ದರೆ ಕೇವಲ ಒನ್ ಸೈಡ್ ಟೋಕನ್ಗೆ ಮಾತ್ರ ಅವಕಾಶ ನೀಡಲಾಗುವುದು. ಒನ್ ಸೈಡ್ಗೂ ದುಪ್ಪಟ್ಟು ಹಣ ನೀಡಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜನವರಿ 1ರಿಂದಲೇ ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಆದರೆ, ಆದರೆ, ಈ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇಲ್ಲದ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಡೆಡ್ ಲೈನ್ ಅನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿತ್ತು. ಟೋಲ್ ಪ್ಲಾಜಾಗಳ ಶೇ.75ರಷ್ಟು ಲೇನ್‌ಗಳಲ್ಲಿ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಉಳಿದ ಶೇ.25ರಷ್ಟು ಲೇನ್‌ಗಳನ್ನು ಹೈಬ್ರಿಡ್ ಲೇನ್‌ಗಳೆಂದು ಪರಿಗಣಿಸಲಾಗಿತ್ತು. ಈ ಲೇನ್‌ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದೆಯೂ ನಗದು ಸೇರಿದಂತೆ ಇತರೆ ಸಾಮಾನ್ಯ ಪದ್ಧತಿಯಲ್ಲೂ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿತ್ತು. ನಿನ್ನೆ ರಾತ್ರಿಯಿಂದ ಆ ಆಯ್ಕೆಯನ್ನು ರದ್ದುಗೊಳಿಸಲಾಗಿದೆ.
ಖಾಸಗಿಯಾಗಿರಲಿ ಅಥವಾ ವಾಣಿಜ್ಯ ಬಳಕೆಗೆ ಆಗಿರಲಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೂ ಫಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಆರಂಭದಲ್ಲಿ ಡಿಸೆಂಬರ್ 15ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ನಂತರ ಅದನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ಕೊನೆಗೆ ಅಂತಿಮವಾಗಿ ಜನವರಿ 1ಕ್ಕೆ ಮುಂದೂಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇಂದಿನಿಂದ ಕಟ್ಟುನಿಟ್ಟಾಗಿ ಫಾಸ್ಟ್ಟ್ಯಾಗ್ ವ್ಯವಸ್ಥೆ ಜಾರಿಗೆ ಬರಲಿದೆ.
ಫಾಸ್ಟ್ಯಾಗ್ ಖರೀದಿಸಲು ನಿಮ್ಮ ವಾಹನದ ಆರ್ಸಿ ದಾಖಲೆಗಳನ್ನು ನೀಡಬೇಕಾಗುತ್ತದೆ. ವಾಹನದ ವಿಂಡ್ ಸ್ಕ್ರೀನ್ ಮೇಲೆ ಫಾಸ್ಟ್ ಟ್ಯಾಗ್ ಅಂಟಿಸಲಾಗುತ್ತದೆ. ಫಾಸ್ಟ್ಯಾಗ್ ಖಾತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ UPI ಐಡಿಯನ್ನು ಲಿಂಕ್ ಮಾಡಬೇಕಾಗುತ್ತದೆ. ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡರೆ ಟೋಲ್ ಪ್ಲಾಜಾ ಬಳಿ ವಾಹನಗಳನ್ನು ನಿಲ್ಲಿಸಬೇಕೆಂದಿಲ್ಲ. ಸ್ವಯಂಚಾಲಿತವಾಗಿ ಶುಲ್ಕ ಫಾಸ್ಟ್ ಟ್ಯಾಗ್ ಮೂಲಕ ಕಡಿತವಾಗುತ್ತದೆ. ಫಾಸ್ಟ್ ಟ್ಯಾಗ್ ಅನ್ನು ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಅಥವಾ ಪ್ರಿಪೇಡ್ ವಾಲೆಟ್ ಗೆ ಸಂಪರ್ಕಿಸಲಾಗುತ್ತದೆ. ಫಾಸ್ಟ್ ಟ್ಯಾಗ್ ಆರ್ಎಫ್ಐಡಿ ತಂತ್ರಜ್ಞಾನ ಮೂಲಕ ಕಾರ್ಯ ನಿರ್ವಹಿಸುತ್ತದೆ. ಫಾಸ್ಟ್ ಟ್ಯಾಗ್ ನ್ನು ಪ್ರಸ್ತುತ 23 ಬ್ಯಾಂಕುಗಳಿಗೆ ಜೋಡಿಸಲಾಗಿದೆ.
ಪೇಟಿಎಂ, HDFC ಬ್ಯಾಂಕ್, ICICI ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರ ಬ್ಯಾಂಕ್ ಇತ್ಯಾದಿಗಳ ಮೂಲಕ ಫಾಸ್ಟ್ಟ್ಯಾಗ್ ಖರೀದಿಸಬಹುದು.