ಚಂಡೀಗಢ: ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದಿದ್ದು, ದೆಹಲಿ ಪ್ರವೇಶಕ್ಕೆ ಅನುಮತಿ ನೀಡಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದ ವಿವಿಧ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ – ಹರಿಯಾಣ ಹಾಗೂ ಇತರ ರಾಜ್ಯಗಳ ರೈತರಿಗೆ ರಾಷ್ಟ್ರ ರಾಜಧಾನಿ ದೆಹಲಿ ಚಲೋ ಆಂದೋಲನ ಕೈಗೊಂಡಿದ್ದಾರೆ. ದೆಹಲಿಯ ಬುರಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಿದೆ ಎಂದು ಪಂಜಾಬ್ ರೈತ ಸಂಘಟನೆಗಳು ತಿಳಿಸಿವೆ.
ನಾವು ದೆಹಲಿಗೆ ಸುರಕ್ಷಿತವಾಗಿ ಹೋಗಲು ಅನುಮತಿ ನೀಡಲಾಗಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಅವರು ಹೇಳಿದ್ದಾರೆ.ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ದೆಹಲಿಯ ಬುರಾರಿಯಲ್ಲಿ ಆಂದೋಲನ ನಡೆಸಲು ಅವಕಾಶ ನೀಡಿದ್ದಾರೆ ಎಂದುತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಖಚಿತಪಡಿಸಿದ್ದಾರೆ. ಪ್ರತಿಭಟಿಸುವ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ರೈತರಿಗೆ ದೆಹಲಿ ಪ್ರವೇಶಿಸಲು ಅವಕಾಶ ನೀಡಿದ ಕೇಂದ್ರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಮುಂದಾಗಬೇಕು ಮತ್ತು ರೈತರೊಂದಿಗೆ ಮಾತುಕತೆ ಪ್ರಾರಂಭಿಸಬೇಕು ಎಂದು ಪಂಜಾಬ್ ಸಿಎಂ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.



