ಡಿವಿಜಿ ಸುದ್ದಿ, ಹೊಸದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ತರಳಬಾಳು ಶಾಖಾ ಮಠ ಸಾಣೇಹಳ್ಳಿಯಲ್ಲಿ ನವಂಬರ್ 1 ರಿಂದ 7 ರವರೆಗೆ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವ ಜರುಗಲಿದೆ.
ಪ್ರತಿ ದಿನ ಸಂಜೆ 6 ಗಂಟೆಗೆ ವೇದಿಕೆಯ ಕಾರ್ಯಕ್ರಮಗಳು ನಡೆಯಲಿದ್ದು, ಈ ಬಾರಿಯ ನಾಟಕೋತ್ಸವ ಪೂರ್ವಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅಂತರ್ಜಾಲದಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಾಟಕೋತ್ಸವದ ಬಗ್ಗೆ ವಿವರಣೆ ನೀಡಿದರು.
ಈ ಬಾರಿ ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ… ಧ್ಯೇಯ ವಾಕ್ಯದಡಿ ನವೆಂಬರ್ 1 ರಿಂದ 7 ರ ವರೆಗೆ ‘ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವ’ ಆಯೋಜಿಸಿಲಾಗಿದೆ. ಪ್ರತಿ ವರ್ಷದಂತೆ ವಚನಗೀತೆ, ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ನಾಟಕ ಪ್ರದರ್ಶನ ಧ್ಯಾನ, ಮೌನ, ಪ್ರಾರ್ಥನೆಗಳು ಅಂತರ್ಜಾಲದಲ್ಲಿ ನಡೆಯಲಿವೆ. ನಾಟಕೋತ್ಸವದಲ್ಲಿ ಸಾಣೇಹಳ್ಳಿಯ ಧನ್ವಂತರಿ ಚಿಕಿತ್ಸೆ, ಮುದುಕನ ಮದುವೆ, ಮರಣ್ ಹೀ ಮಹಾನವಮಿ (ಹಿಂದಿ), ಶರಣ ಸತಿ – ಲಿಂಗ ಪತಿ, ಉರಿಲಿಂಗಪೆದ್ದಿ, ಕರೋನಾ (ಬೀದಿನಾಟಕ) ನಾಟಕಗಳಲ್ಲದೆ ಹೊರಗಿನ ತಂಡಗಳಿಂದ, ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ, ಪಾಪು ಗಾಂಧಿ; ಗಾಂಧಿ ಬಾಪು ಆದ ಕಥೆ, ಉಷಾಹರಣ (9 ನಾಟಕಗಳು) ಪ್ರದರ್ಶನಗೊಳ್ಳಲಿವೆ.

ಕನ್ನಡದ ಅಳಿವು ಉಳಿವು ದೂರದ ನೋಟದ ಬಗ್ಗೆ, ಪ್ರೊ. ಜಿ ಎನ್ ಉಪಾಧ್ಯಾಯ, ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರ ಬಗ್ಗೆ, ಪ್ರೊ. ವೆಂಕಟಾಚಲ ಹೆಗಡೆ, ಕನ್ನಡ ರಂಗಭೂಮಿಯ ಮುಂದಿನ ಹೆಜ್ಜೆಗಳು ಬಗ್ಗೆ ಡಾ. ಭರತ್‌ಕುಮಾರ್ ಪೋಲಿಪೋ, ಪ್ರಸ್ತುತ ಶೈಕ್ಷಣಿಕ ಸವಾಲುಗಳು ಕುರಿತಂತೆ ಆರ್ ಜಯಕುಮಾರಿ, ಪರಿಸರ – ಅತಿಮಾನವ ಬಗ್ಗೆ ಪ್ರೊ. ನಾಗೇಶ್ ಹೆಗಡೆ, ಮಹಿಳೆ-ನೀರು-ಸಮಾಜ ಕುರಿತಂತೆ ರೂಪಾ ಹಾಸನ, ಅಮೇರಿಕಾದಲ್ಲಿ ಕನ್ನಡ ರಂಗಭೂಮಿ ಮಾಹಿತಿಯನ್ನು ವಲ್ಲೀಶ್ ಶಾಸ್ತ್ರಿ, ಶರಣರ ಕೃಷಿ ಬಗ್ಗೆ ಪ್ರಿಯದರ್ಶಿನಿ ಈಶ್ವರ ಸಾಣ ಕೊಪ್ಪ, ಶಿವಸಂಚಾರ ಮತ್ತು ರಂಗಭೂಮಿ ಕುರಿತಂತೆ ಎನ್ ಆರ್ ವಿಶುಕುಮಾರ್, ಕುಟುಂಬ ಮತ್ತು ರಂಗಭೂಮಿ ಕುರಿತಂತೆ ಲಲಿತ ಕಪ್ಪಣ್ಣ ಮಾತನಾಡುವರು.
ಪಂಡಿತಾರಾಧ್ಯ ಶ್ರೀಗಳ ಸಂಪಾದಿತ ‘ನೊಂದವರ ನೋವ ನೋಯದವರೆತ್ತ ಬಲ್ಲರೊ?’ ಕೃತಿಯನ್ನು ಡಾ. ಹೆಚ್ ಎಲ್ ಪುಷ್ಪಾ, ಮತ್ತು ‘ಸಂಸ್ಕಾರ’ ಕೃತಿಯನ್ನು ಮುಕ್ತಾ ಬಿ ಕಾಗಲಿ ಲೋಕಾರ್ಪಣೆಗೊಳಿಸಿ ಮಾತನಾಡಲಿದ್ದಾರೆ. ನವೆಂಬರ್ 7 ರಂದು ಇಸ್ರೋ ವಿಶ್ರಾಂತ ಅಧ್ಯಕ್ಷ ಪದ್ಮಶ್ರೀ ಎ.ಎಸ್. ಕಿರಣ್ ಕುಮಾರ್ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಹೊಸದುರ್ಗ ಕ್ಷೇತ್ರದ ಶಾಸಕರಾದ ಗೂಳಿಹಟ್ಟಿ ಡಿ. ಶೇಖರ್ ಭಾಗವಹಿಸುವರು.



