ನವದೆಹಲಿ: ಕೊರೊನಾದಂತಹ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೊರೊನಾ ಸಾಂಕ್ರಾಮಿಕ ಸಂಬಂಧ ದಾಖಲಾಗಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ನ್ಯಾ.ಎಲ್.ಎನ್.ರಾವ್ ಮತ್ತು ನ್ಯಾ.ರವೀಂದ್ರ ಎಸ್ ಭಟ್ ನೇತೃತ್ವದ ತ್ರಿಸದಸ್ಯ ಪೀಠ, ಸುಪ್ರೀಂ ಕೋರ್ಟ್ ವ್ಯವಹರಿಸಬೇಕಾದ ಕೆಲವು ರಾಷ್ಟ್ರೀಯ ಸಮಸ್ಯೆಗಳಿವೆ. ಆದರೆ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್‌ಗಳು ವಿವಿಧ ರಾಜ್ಯಗಳಲ್ಲಿನ ಅರ್ಜಿಗಳನ್ನು ಆಲಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿಲ್ಲ ಪೀಠ ಸ್ಪಷ್ಟಪಡಿಸಿದೆ.
ಕೋವಿಡ್ ಬಿಕ್ಕಟ್ಟಿನಲ್ಲಿ ಆಮ್ಲಜನಕ, ಔಷಧಿಗಳು, ಲಸಿಕೆಗಳು ಮತ್ತು ಇತರ ಸರಬರಾಜುಗಳ ಕುರಿತಂತೆ ವಿವಿಧ ಹೈಕೋರ್ಟ್ ಗಳಲ್ಲೂ ದಾಖಲಾಗುತ್ತಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಆಕ್ಸಿಜನ್, ಔಷಧಿಗಳು ಸೇರಿದಂತೆ ಅಗತ್ಯ ಪರಿಕರಗಳ ಸುಗಮ ಸರಬರಾಜು ಸಮಸ್ಯೆ ನೀಗಿಸಲು ರಾಷ್ಟ್ರೀಯ ಯೋಜನೆ ರೂಪಿಸಿ ಎಂದು ಸೂಚಿಸಿತ್ತು.