ನವದೆಹಲಿ: ಕೊರೋನಾ ವೈರಸ್ 2 ನೇ ಅಲೆ ದೇಶವನ್ನೇ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಡವರಿಗೆ ಮೇ, ಜೂನ್ ತಿಂಗಳ ವರೆಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಮೇ, ಜೂನ್ ತಿಂಗಳಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸರ್ಕಾರ ವಿತರಣೆ ಮಾಡಲಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳಿಗೆ 5 ಕೆ.ಜಿಯಷ್ಟು ಆಹಾರ ಧಾನ್ಯಗಳು ಸಿಗಲಿದ್ದು, ಒಟ್ಟು 80 ಕೋಟಿ ಫಲಾನುಭವಿಗಳಿಗೆ 2 ತಿಂಗಳ ಕಾಲ ಉಚಿತ ಧಾನ್ಯಗಳು ಲಭ್ಯವಾಗಲಿದೆ. ಇದಕ್ಕಾಗಿ ಸರ್ಕಾರ 26,000 ಕೋಟಿ ವೆಚ್ಚವಾಗಲಿದೆ. ಕಳೆದ ವರ್ಷ ಕೊರೋನಾ ಲಾಕ್ ಡೌನ್ ವಿಧಿಸಿದ್ದಾಗ ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ಧಾನ್ಯಗಳನ್ನು ನೀಡುವ ಯೋಜನೆಯನ್ನು ಘೋಷಿಸಿದ್ದರು.



