ದೇಶದ ವಿವಿಧ ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ; ಜನರಲ್ಲಿ ಮತ್ತೊಂದು ಸೋಂಕಿನ ಆತಂಕ ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ನವದೆಹಲಿ:  ಕೊರೊನಾ  ಸಂಕಷ್ಟದಿಂದ ಚೇತರಿಸಿಕೊಳ್ಳುವ ಮುನ್ನವೇ  ಕೇರಳ, ತಮಿಳುನಾಡು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ವಿಚಿತ್ರವಾದ ಹಕ್ಕಿ ಜ್ವರಗಳು ಕಾಣಿಸಿಕೊಳ್ಳುತ್ತಿದ್ದು, ಹೊಸ ಆತಂಕ ಸೃಷ್ಟಿಸಿದೆ.

ಇನ್ನು ಉತ್ತರ ?ಭಾರತದ ಹಿಮಾಚಲ ಪ್ರದೇಶ, ರಾಜಸ್ತಾನ್ ರಾಜ್ಯಗಳಲ್ಲಿಯೂ ಸಹ  ಸೋಂಕು ಕಾಣಿಸಿಕೊಂಡಿದ್ದು, ಮಧ್ಯಪ್ರದೇಶ, ಜಾರ್ಖಂಡ್, ಪಂಜಾಬ್, ಚತ್ತೀಸ್‍ಗಢ, ಗುಜರಾತ್‍ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪೋಗ್ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿ ಜನವರಿಯಲ್ಲಿ 2300 ವಲಸಿಗ ಪಕ್ಷಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ಧರ್ಮಶಾಲಾ ಅರಣ್ಯ ಪ್ರದೇಶದ ಮುಖ್ಯ ಸಂರಕ್ಷಣಾಧಿಕಾರಿ ಉಪಸಾನಪಟಿಯಾಲ ಖಚಿತ ಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಿಮಾಚಲಪ್ರದೇಶ ರಾಜ್ಯ ಸರ್ಕಾರ ಫಾತೆಪುರ್, ದೇರಾ, ಜವಾಲಿ, ಇಂದೋರ್‍ನ ಪ್ರದೇಶಗಳಲ್ಲಿ ಕೋಳಿ ಮಾಂಸ ಮಾರಾಟ ಮತ್ತು ರಫ್ತನ್ನು ನಿಷೇಧಿಸಿದೆ. ಜತೆಗೆ ಪಶುಸಂಗೋಪನಾ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿದ್ದು, ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜಸ್ತಾನದಲ್ಲಿ 522 ಕಾಗೆಗಳು ಸಾವನ್ನಪ್ಪಿವೆ ಎಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕ ವೀರೇಂದ್ರಸಿಂಗ್ ತಿಳಿಸಿದ್ದಾರೆ. ಜೈಪುರದಲ್ಲಿ 36ಕಾಗೆಗಳು ಮೃತಪಟ್ಟಿವೆ. ಜಲ್ವಾರದಲ್ಲಿ ಮೊದಲ ಬಾರಿಗೆ ಕಾಗೆಗಳು ಸಾವನ್ನಪ್ಪಿದ್ದು, ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ. ಕೋಟಾದಲ್ಲಿ 12, ಬರ್ನಾದಲ್ಲಿ 12, ಬಿಕ್ನೇರ್ 11 ಹಾಗೂ ದೂಸಾ ಜಿಲ್ಲೆಯಲ್ಲಿ 6 ಕಾಗೆಗಳು ಸಾವನ್ನಪ್ಪಿವೆ. ಜೋದ್‍ಪುರದಲ್ಲಿ 4 ಕಾಗೆ ಹಾಗೂ ಒಂದು ಕೋಳಿ ಬಲಿಯಾಗಿವೆ. ವಲಸಿಗ ಹಕ್ಕಿಗಳಿಂದ ಸೋಂಕು ಹರಡಿರಬಹುದೆಂದು ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ.

ಪಕ್ಷಿಗಳಿಂದ ಮನುಷ್ಯರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಕೋಳಿ ಫಾರಂಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್‍ನ ಬಂತ್ವಾ ಜಿಲ್ಲೆಯಲ್ಲಿ 53 ಪಕ್ಷಿಗಳು ಸಾವನ್ನಪ್ಪಿವೆ. ಪಕ್ಷಿಗಳ ರೆಕ್ಕೆಗಳು ಮುರಿದು ಬೀಳುತ್ತಿದ್ದು, ನಿತ್ರಾಣಗೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಸಾವನ್ನಪ್ಪಿರುವ ಹಕ್ಕಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿದೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಇಂದೋರ್‍ನಲ್ಲಿ 160 ಕಾಗೆಗಳು, ಕೋಳಿಗಳನ್ನು ಕೊಲ್ಲಲಾಗಿದೆ. ಕೋಳಿ ಫಾರಂನಲ್ಲಿ ಕಟ್ಟೆಚ್ಚರ ವಹಿಸಿ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಕೆಲವು ಕಡೆ ಹಕ್ಕಿಗಳು ಸತ್ತಿವೆಯಾದರೂ ಅದಕ್ಕೆ ಸೋಂಕು ಕಾರಣವಲ್ಲ. ಉಷ್ಣಾಂಶ ಶೇ.5ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಕುಸಿದಿರುವುದರಿಂದ ಕೋಳಿಗಳು ಸಾವನ್ನಪ್ಪಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಬಾತುಕೋಳಿ ಹಾಗೂ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೊಟ್ಟಾಯಂ ಜಿಲ್ಲೆಯ ನೀಂದೋರ್‍ನ ಬಾತುಕೋಳಿ ಫಾರಂನಲ್ಲಿ 1500 ಪಕ್ಷಿಗಳು ಸಾವನ್ನಪ್ಪಿದ್ದು, ಆಲಪ್ಪುಳ ಜಿಲ್ಲೆಯ ಕುಟ್ಟಂಡ ಪ್ರದೇಶದ ಕೆಲವು ಫಾರಂಗಳಲ್ಲೂ ಹಕ್ಕಿ ಜ್ವರ ವರದಿಯಾಗಿದೆ.

ಕೇರಳದ ತಿರುವನಂತಪುರಂನ ಫಾರಂಗಳಲ್ಲಿರುವ ಕೋಳಿ ಮತ್ತು ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಅಂದಾಜು 40ಸಾವಿರ ಪಕ್ಷಿಗಳನ್ನು ನಾಶಪಡಿಸಲಾಗಿದ್ದು, ಇವುಗಳಲ್ಲಿ ಎಚ್5ಎನ್8 ಸೋಂಕಿರುವುದು ಖಚಿತವಾಗಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಸೋಂಕು ಬೇರೆ ಕಡೆ ಹರಡದಂತೆ ಹಾಗೂ ಮನುಷ್ಯರಿಗೆ ತಗುಲದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *