ಪಾಟ್ನಾ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಕ್ಕೆ 20 ಅಂಶಗಳ ಯೋಜನೆ ಜಾರಿಗೆ ನಿರ್ಧರಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಪಿಯುಸಿ ತೇರ್ಗಡೆ ಮಾಡಿರುವ ಅವಿವಾಹಿತ ಹೆಣ್ಣು ಮಕ್ಕಳಿಗೆ 25 ಸಾವಿರ ಹಾಗೂ ಪದವಿ ಮುಗಿಸಿರುವ ವಿವಾಹಿತ ಮತ್ತು ಅವಿವಾಹಿತ ಹೆಣ್ಣು ಮಕ್ಕಳಿಗೆ 50 ಸಾವಿರ ರೂಪಾಯಿ ನೀಡಲಾಗುವುದು ಘೋಷಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಪಿಯುಸಿ ತೇರ್ಗಡೆ ಹೊಂದಿದ ಅವಿವಾಹಿತ ಹೆಣ್ಣು ಮಕ್ಕಳಿಗೆ ಮತ್ತು ಡಿಗ್ರಿ ತೇರ್ಗಡೆ ಹೊಂದಿರುವ ವಿವಾಹಿತ ಮತ್ತು ಅವಿವಾಹಿತ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವುದಾಗಿ ಕಳೆದ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಎನ್ ಡಿಎ ಮೈತ್ರಿಕೂಟ ಭರವಸೆ ನೀಡಿತ್ತು.
ರಾಜ್ಯದಲ್ಲಿ ಮೊನ್ನೆ ಫೆಬ್ರವರಿ 1ರಂದು ಪಿಯುಸಿಯವರಿಗೆ ಪರೀಕ್ಷೆಗಳು ಆರಂಭವಾಗಿದ್ದು ಇದರಲ್ಲಿ ತೇರ್ಗಡೆ ಹೊಂದಿದ ಹೆಣ್ಣುಮಕ್ಕಳಿಗೆ ತಲಾ 25 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಉನ್ನತ ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳಿಗೆ ಉತ್ತೇಜನ ನೀಡುವ ಮುಖ್ಯಮಂತ್ರಿಗಳ ಕನ್ಯಾ ಉತ್ತಮ ಯೋಜನೆಯಡಿ ಈ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇಕಡಾ 82.62ರಷ್ಟು ಹೆಣ್ಣು ಮಕ್ಕಳು ತೇರ್ಗಡೆ ಹೊಂದಿದ್ದರು. ಅದು ಗಂಡು ಮಕ್ಕಳಿಗಿಂತ ತೇರ್ಗಡೆ ಸಂಖ್ಯೆ ಶೇಕಡಾ 4.01ರಷ್ಟು ಹೆಚ್ಚಾಗಿದೆ.



