ನವದೆಹಲಿ: ಬ್ಯಾಂಕ್ ಗಳ ವಿಲೀನ ಅಥವಾ ಹಣಕಾಸು ಸಂಸ್ಥೆಗಳ ಖಾಸಗೀಕರಣದಿಂದ ನೌಕರರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಕಾರ್ಮಿಕರ ಕಾಳಜಿಗೆ ಕೇಂದ್ರ ಬದ್ಧವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬ್ಯಾಂಕ್ʼಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮ ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ʼನ ನೇತೃತ್ವದಲ್ಲಿ ನೌಕರರು ಎರಡು ದಿನಗಳ ಬ್ಯಾಂಕ್ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ನೀಡಿದ್ದಾರೆ. ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ವಲಯದ ಅಗತ್ಯಗಳನ್ನು ಪೂರೈಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾತ್ರದ ಬ್ಯಾಂಕ್ ಗಳು ನಮಗೆ ಬೇಕು ಎಂದು ಸೀತಾರಾಮನ್ ಹೇಳಿದರು.



