ನವದೆಹಲಿ : ರಾಜ್ಯದ ವಿಧಾನ ಪರಿಷತ್ ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ನಿಧನದಿಂದ ತೆರವಾಗಿದ್ದಂತ ಒಂದು ಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಮಾರ್ಚ್ 15ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶವನ್ನು ಘೋಷಣೆ ಮಾಡುವುದಾಗಿ ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಧರ್ಮೇಗವಡ ಅವರು ಇತ್ತೀಚೆಗೆ ನಿಧನ ಹೊಂದಿದ್ದರು.
ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ಕೇಂದ್ರ ಚುನಾವಣಾ ಆಯೋಗವು, ಎಸ್. ಎಲ್. ಧರ್ಮೇಗೌಡ ಅವರ ನಿಧನದಿಂದಾಗಿ ತೆರವಾಗಿದ್ದ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಫೆಬ್ರವರಿ 25ರಂದು ಚುನಾವಣೆಗಾಗಿ ಅಧಿಸೂಚನೆ ಹೊರಡಿಸಲಾಗುತ್ತದೆ. ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮಾರ್ಚ್ 04 ಕೊನೆಯ ದಿನಾಂಕವಾಗಿದೆ. ಮಾರ್ಚ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾರ್ಚ್ 8ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ಮಾರ್ಚ್ 15ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮಾರ್ಚ್ 15ರಂದು ಸಂಜೆ 5 ಗಂಟೆಗೆ ಮತಏಣಿಕೆ ನಡೆದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ.



