ಲಿಂಗಸುಗೂರು: ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಕೇವಲ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಕುಟುಂಬದ ಸಮಾವೇಶವಾಗಿದೆ. ಹೀಗಾಗಿ ಮಹಾಸಭಾದಿಂದ ಒಳಪಂಗಡಗಳು ಏನನ್ನೂ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾ ಇದುವರೆಗೆ ಒಳಪಂಗಡಗಳಿಗೆ ಮೀಸಲಾತಿ ಬಗ್ಗೆ ಕಾಳಜಿ ವಹಿಸಿಲ್ಲ. ದಾವಣಗೆರೆಯಲ್ಲಿ ನಡೆದೆ ಅಧಿವೇಶನ ರಾಜ್ಯದ ಮೂರು ಕುಟುಂಬಗಳ ಹಿತಾಸಕ್ತಿ ಕಾಪಾಡಲು ನಡೆದ ಕಾರ್ಯಕ್ರವಾಗಿದೆ. ಪಂಚಮಸಾಲಿಗಳಿಗೆ 2 (ಡಿ) ಮೀಸಲಾತಿ ಸಿಗುವಾಗ ಮಹಾಸಭಾ ಮೌನವಹಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜ ಒಡೆಯುವ ಕುತಂತ್ರ ನಡೆಸಿದಾಗಲೂ ಅವರೊಂದಿಗೆ ಇದ್ದವರು ಇವರೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರಶೈವ ಲಿಂಗಾಯತರು ಒಂದೇ ಎಂಬ ಸಂದೇಶ ನೀಡುವಲ್ಲಿ ವೀರಶೈವ ಮಹಾಸಭಾ ವಿಫಲವಾಗಿದೆ. ಒಳಪಂಗಡಗಳು ಹರಿದು ಹಂಚಿಹೋಗಿವೆ. ಈ ಕುರಿತು ಚಿಂತನೆ ನಡೆಸಿಲ್ಲ. ಸಮಾಜದ ಬಹುತೇಕ ಕಾವಿಧಾರಿಗಳು ತಮ್ಮ ತಮ್ಮ ಮಠ ಅಭಿವೃದ್ಧಿ, ಹೈಟೆಕ್ ಜೀವನ ಶೈಲಿ, ವಿದೇಶಿ ಪ್ರವಾಸದಲ್ಲಿ ಮೋಜು, ಮಸ್ತಿ ನಡೆಸುತ್ತಿದ್ದಾರೆ ಎಂದರು.



