ಡಿವಿಜಿ ಸುದ್ದಿ, ತುಮಕೂರು: ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಹೆಚ್ಚಿನ ದರ ವಸೂಲಿ ಮಾಡಿದರೆ, ದೂರು ನೀಡಿ. ಈ ನಿಮ್ಮ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಹೆಚ್ಚಿನ ದರ ವಸೂಲಿ ಮಾಡಿರುವುದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಚಿಕಿತ್ಸೆಗೆ ಈಗಾಗಲೇ ದರ ನಿಗದಿ ಮಾಡಿದ್ದೇವೆ. ಇದು ಸರಿಯಾಗಿ ಪಾಲನೆ ಆಗುತ್ತಿಲ್ಲ. ಕೊರೊನಾ ಜೊತೆಗೆ ಕೆಲವು ರೋಗಗಳಿಂದ ಬಹು ಅಂಗಾಂಗ ವೈಫಲ್ಯವೂ ಆಗಿರುತ್ತದೆ. ಆಗ ಅದಕ್ಕೆ ಪ್ರತ್ಯೇಕ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಹೇಳಿದರು.
ಸರ್ಕಾರ ನಿರ್ದೇಶನ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಆಸ್ಪತ್ರೆಗಳು ನಡೆದುಕೊಳ್ಳಬೇಕು. ಕೊರೊನಾದ ಈ ಸಂದರ್ಭದಲ್ಲಿ ಎಲ್ಲರೂ ಮಾನವೀಯವಾಗಿ ನಡೆದುಕೊಳ್ಳಬೇಕು. ರಾಜ್ಯದಲ್ಲಿ ಐದು ಲಕ್ಷ ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ನಾಲ್ಕು ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದರು.



