ಡಿವಿಜಿ ಸುದ್ದಿ, ಮಂಡ್ಯ: ಕೆಪಿಸಿಸಿ ವತಿಯಿಂದ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನಾಳೆ 9(ಅ.10) ಮಂಡ್ಯದಲ್ಲಿ ರಾಜ್ಯ ಮಟ್ಟದ ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತ ಸಮ್ಮೇಳನ ಆಯೋಜಿಸಿದೆ. ಕಾಯ್ದೆಗಳ ತಿದ್ದುಪಡಿ ತಿರಸ್ಕರಿಸುವ ಕುರಿತು ಕಾಂಗ್ರೆಸ್ ಮುಖಂಡರು ರೈತ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರಕಾಶ್ ಕಮ್ಮರಡಿ, ಚಾಮರಸ ಮಾಲಿಪಾಟೀಲ, ಗಾಯಿತ್ರಿ, ಡಾ.ವಾಸು, ಸುನಂದಾ ಜಯರಾಂ ಭಾಗಿಯಾಗಲಿದ್ದಾರೆ.

ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ, ಡಾ.ಜಿ.ಪರಮೇಶ್ವರ ಭಾಗವಹಿಸಲಿದ್ದಾರೆ.
ರಾಜ್ಯದ ವಿವಿಧ ಭಾಗದಿಂದ 1,500 ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು 700 ಜನರನ್ನು ಅಂಬೇಡ್ಕರ್ ಭವನದ ಒಳಗೆ ಕೂರಿಸಲು ವ್ಯವಸ್ಥೆ ಮಾಡಲಾಗಿದೆ. ಕಾಯ್ದೆ ವಿರುದ್ಧ ರೈತರ ಸಹಿ ಸಂಗ್ರಹಿಸಿ ರಾಷ್ಟ್ರಪತಿಯವರಿಗೆ ಸಲ್ಲಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.



