ದಾವಣಗೆರೆ: ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ನಡೆದಿದೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟೆ ಸೇತುವೆ ಬಳಿ ಈ ಅವಘಡ ಸಂಭವಿಸಿದೆ. ಸ್ಥಳದಲ್ಲೇ ಕಾರಿನಲ್ಲಿದ್ದ ಮೂವರು ಮಹಿಳೆಯರು ಸಾವು ಕಂಡಿದ್ದರೆ, ಕಾರು ಚಾಲಕನನ್ನು ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಡೇಹಳ್ಳಿ ಗ್ರಾಮದ ದಾಕ್ಷಾಯಿಣಿ, ಸುಮಾ, ಶಾರದಮ್ಮ, ಕಾರು ಚಾಲಕ ಸುನೀಲ್ ಎಂದು ತಿಳಿದು ಬಂದಿದೆ. ಲಾರಿಯು ಬಸ್ ಗೆ ಗುದ್ದಿದ್ದು, ಬಸ್ ಹಾಗೂ ಕಾರಿನ ಕಾರಿಗೆ ಡಿಕ್ಕಿಯಾಗಿದೆ. ಇನ್ನು ಲಾರಿ ಚಾಲಕನ ಸ್ಥಿತಿ ಗಂಭೀರವಾಗಿದೆ.
ಮೃತರು ಯಡೇಹಳ್ಳಿಯಿಂದ ನ್ಯಾಮತಿ ತಾಲ್ಲೂಕಿನ ಹಳೇಜೋಗ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದರು. ಸ್ಥಳಕ್ಕೆ ಹೊನ್ನಾಳಿ ಸಿಪಿಐ ದೇವರಾಜ್ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು , ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಕಾರ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಮುಂಭಾಗವು ಹಾನಿಯಾಗಿದೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



