ವಿಜಯನಗರ: ಫೆ.23ರಿಂದ 26ರವರೆಗೆ ನಡೆಯುವ ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಪಿ. ಶ್ರವಣ್ ಆದೇಶ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಕರೊನಾ ಪ್ರಕರಣ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಈ ನಡುವೆ ಕೊಟ್ಟೂರೇಶ್ವರ ಭಕ್ತಾದಿಗಳಿಗೆ ಬೇಸರ ಮೂಡಿಸುವ ಸಂಗತಿಯೊಂದು ಹೊರಬಿದ್ದಿದೆ. ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ. ವಿಜಯನಗರ ಜಿಲ್ಲೆಯ ಐತಿಹಾಸಿಕ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವದಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಪಾಲ್ಗೊಳ್ಳುವ ಮೂಲಕ ಅದ್ಧೂರಿಯಾಗಿ ನಡೆಯುತ್ತದೆ.
ಈ ಸಲ ಕರೊನಾ ಸೋಂಕು ಹಬ್ಬುವ ಭೀತಿಯಿಂದ ರಥೋತ್ಸವಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟ. ಹೀಗಾಗಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



