ಶಿವಮೊಗ್ಗ: ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ( ಶಿಮುಲ್) ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ (ಮಾ.01) ಪ್ರತಿ ಲೀಟರ್ಗೆ ರೂ.2.50 ಏರಿಕೆಯಾಗಿದೆ.
ಈ ಬಗ್ಗೆ ಶಿಮುಲ್ ಅಧ್ಯಕ್ಷ ಶ್ರೀಪಾದ್ ರಾವ್ ಮಾತನಾಡಿ, ಪ್ರತಿ ಲೀಟರ್ ಹಾಲಿಗೆ ರೂ. 2.50 ದರ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.ಸೋಮವಾರ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು. ಈ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ರೀತಿ ಪ್ರೋತ್ಸಾಹ ಧನ ನೀಡುವ ಮೂಲಕ ಹಾಲು ಉತ್ಪಾದನೆಗೆ ಸಹಕಾರ ಆಗುತ್ತದೆ ಎಂದು ಹೇಳಿದರು.
ಶಿಮುಲ್ ಆವರಣದಲ್ಲಿ ಹಾಲಿನ ಪೌಡರ್ ಉತ್ಪಾದನೆ ಮಾಡುವ ಕುರಿತು ಆಡಳಿತ ಮಂಡಳಿಯು ಸಂಸದ ರಾಘವೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇದಕ್ಕಾಗಿ 1,400 ಕೋಟಿ ರೂ. ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಸಂಸದ ರಾಘವೇಂದ್ರ ಅವರು ಸಿಎಂ ಭೇಟಿ ಮಾಡಿ, ಈ ಬಜೆಟ್ನಲ್ಲಿಯೇ ಘೋಷಣೆ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಇದರಿಂದ ಇತರೆ ಕೆಎಂಎಫ್ ಡೈರಿಯಂತೆ ಶಿಮುಲ್ನಲ್ಲಿಯೂ ಸಹ ಹಾಲಿನ ಪೌಡರ್ ಘಟಕ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳಿವೆ ಎಂದು ತಿಳಿಸಿದರು.



