ಬೆಂಗಳೂರು: ದೀಪಾವಳಿ ಹಬ್ಬದ ದೀಪಾಲಂಕಾರಕ್ಕೆ ತಮ್ಮ ಮನೆಗೆ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಎಳೆದ ಆರೋಪದ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಬೆಸ್ಕಾಂಗೆ 68,526 ರೂ. ದಂಡದ ಮೊತ್ತವನ್ನು ಪಾವತಿಸಿದ್ದಾರೆ.
ಕುಮಾರಸ್ವಾಮಿ ಅವರ ಮನೆಯನ್ನು ಪರಿಶೀಲಿಸಿದ ಬೆಸ್ಕಾಂ ಅಧಿಕಾರಿಗಳು ಏಳು ದಿನಗಳೊಳಗೆ ದಂಡ ಪಾವತಿಸುವಂತೆ ಸೂಚಿಸಿದ್ದರು. ಜಯನಗರದಲ್ಲಿರುವ ಬೆಸ್ಕಾಂ ವಿಜಿಲೆನ್ಸ್ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ವಿದ್ಯುತ್ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿತ್ತು. ವೈರಲ್ ಆಗಿರುವ ವಿಡಿಯೋ ಕ್ಲಿಪ್ ಆಧರಿಸಿ ದೂರು ದಾಖಲಿಸಲಾಗಿತ್ತು.
ಅನಧಿಕೃತವಾಗಿ ಕರೆಂಟ್ ಬಳಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ ದಂಡ ಪಾವತಿಸುವಾಗಿ ಹೇಳಿದ್ದರು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿ ಕಂಪೌಂಡ್ಗಳಿಗೆ “ಕರೆಂಟ್ ಕಳ್ಳ” ಎಂಬ ಪೋಸ್ಟರ್ ಅಂಟಿಸಿದ್ದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಪಾಲುದಾರಿಕೆಯ ಲುಲು ಮಾಲ್ನ ಆಸ್ತಿ ಮತ್ತು ಬಳಕೆ ಮಾಡಿರುವ ವಿದ್ಯುತ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲುಲು ಮಾಲ್ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ. 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ. ಲುಲು ಮಾಲ್ ಕಾಮಗಾರಿ ವೇಳೆ, ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ಬಿಲ್ ನೀಡಿಲ್ಲ. ಆಗ ಲುಲು ಮಾಲ್ಗೆ ಬಳಕೆ ಮಾಡಿದ್ದ ವಿದ್ಯುತ್ಗೆ ದಂಡ ಹಾಕುತ್ತೀರಾ? ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ಎಷ್ಟು ಹಣ ಕಟ್ಟಿದ್ದೀರಾ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್ನಲ್ಲಿ ತಗೊಂಡು ಹೋದರಿ? ಜನರಿಗಾಗಿ ಮಾಡಿದ್ರಾ? ಎಂದು ಆರೋಪಿಸಿದರು.