ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ತಾಪಮಾನದಿಂದ ಜನ ತತ್ತರಿಸಿ ಹೋಗಿದ್ದಾರೆ. ರಾಯಚೂರಲ್ಲಿ ಬುಧವಾರ 45.3 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ 43.3 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 42 ಹಾಗೂ ಬೀದರ್‌ನಲ್ಲಿ 41.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಇನ್ನೂ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ರಾಜ್ಯಾದ್ಯಂತದಿನದಿಂದ ದಿನಕ್ಕೆ ಬೇಸಿಗೆಯ ತಾಪ ಏರುತ್ತಿದ್ದು, ಇದು ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ. ಅತಿ ಸುಸ್ತು, ತಲೆಸುತ್ತಿನಂತಹ ಲಕ್ಷಣಗಳಿಗೆ ಎಲ್ಲಾ ವಯೋಮಾನದವರು ಒಳಗಾಗುತ್ತಿದ್ದಾರೆ. ಅಧಿಕ ತಾಪವು ನಿರ್ಜಲೀಕರಣದಂತಹ ಸಮಸ್ಯೆ ಉಂಟು ಮಾಡುತ್ತದೆ.
ಇದನ್ನು ನಿರ್ಲಕ್ಷಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ದೇಹದ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಾಗಿ ಹೃದಯಾಘಾತ, ಸ್ಟ್ರೋಕ್‌ನಂತಹ ಸಮಸ್ಯೆಗಳಿಗೆ ತುತ್ತಾಗಬಹುದು. ಆದ್ದರಿಂದ ಬಿಸಿಲ ಸಂಬಂಧಿ ದೇಹದಲ್ಲಾಗುವ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.
25 ಜಿಲ್ಲೆಯಲ್ಲಿ ಶಾಖದ ಅಲೆಯ ಎಚ್ಚರಿಕೆ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ 25 ಜಿಲ್ಲೆಗಳಲ್ಲಿ ಮೇ 5ರವರೆಗೆ ಶಾಖದ ಅಲೆಯ ವಾತಾವರಣ ಹೆಚ್ಚಾಗಿರುತ್ತದೆ.ಮುಂದಿನ 5 ದಿನಗಳವರೆಗೆ ಕರ್ನಾಟಕದ ಉತ್ತರ ಒಳಭಾಗದಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.



