ಬೆಂಗಳೂರು: ಶಕ್ತಿ ಯೋಜನೆ ಜಾರಿಯಿಂದಾಗಿ ಸಾರಿಗೆ ಇಲಾಖೆ ನಿಗಮಗಳ ಆದಾಯ 28.94 ಕೋಟಿಗೆ ಹೆಚ್ಚಾಗಿದೆ. ದಿನದ ಆದಾಯ 4.74 ಕೋಟಿ ರೂ. ದಾಟಿದೆ. ಹೀಗಾಗಿ ಈ ಯೋಜನೆಗೆ ಇನ್ನಷ್ಟು ಶಕ್ತಿ ತುಂಬಲು ಇಲಾಖೆಯಲ್ಲಿ ಖಾಲಿ ಇರುವ 13 ಸಾವಿರ ಚಾಲಕ ಕಮ್ ಕಂಡಕ್ಟರ್, ಮೆಕ್ಯಾನಿಕ್ಗಳನ್ನು ನೇಮಿಸಿಕೊಳ್ಳಲು ಹಾಗೂ ನಾಲ್ಕು ಸಾವಿರ ಹೊಸ ಬಸ್ ಖರೀದಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ಐದರಲ್ಲಿ ಮೂರು ಗ್ಯಾರಂಟಿಗಳು ಜಾರಿಯಾಗಿವೆ. ಅತ್ತೆ, ಸೊಸೆ, ವಾರಗಿತ್ತಿ ಅಥವಾ ಮಗಳು ಯಾರೇ ಇರಲಿ, ಮನೆಯೊಡತಿಗೆ ಮಾಸಿಕ ಎರಡು ಸಾವಿರ ರೂ. ಭತ್ಯೆ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಇದೇ ತಿಂಗಳಲ್ಲಿ ಶುರುವಾಗಲಿದೆ. ಆ.16ರಿಂದ ಮನೆಯೊಡತಿ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಜಮೆಯಾಗಲಿದೆ. ಪದವೀಧರ ಮತ್ತು ಡಿಪ್ಲೊಮಾ ವ್ಯಾಸಂಗ ಪೂರೈಸಿದ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ‘ಯುವನಿಧಿ’ ಯೋಜನೆ ಡಿಸೆಂಬರ್ನಲ್ಲಿ ಜಾರಿಯಾಗಲಿದೆ ಎಂದರು.
ಐದು ಗ್ಯಾರಂಟಿಗಳಿಗೆ ವಾರ್ಷಿಕ ಒಟ್ಟು 52 ಸಾವಿರ ಕೋಟಿ ರೂ. ಬೇಕಾಗುತ್ತದೆ. ಪ್ರಸಕ್ತ ವರ್ಷದ ಉಳಿದ ಅವಧಿಗೆ 35,410 ಕೋಟಿ ರೂ. ಅಗತ್ಯವಿದ್ದು, ಅಷ್ಟೂ ಮೊತ್ತವನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ. ಜನ-ಸಾಮಾನ್ಯರ ಮೇಲೆ ತೆರಿಗೆ ಭಾರ ಹೊರಿಸದೆ ಗ್ಯಾರಂಟಿಗಳ ವೆಚ್ಚ ಸರಿದೂಗಿಸಲಿದ್ದೇವೆ. ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ, ಗಣಿಗಾರಿಕೆ ಶುಲ್ಕ ಹೆಚ್ಚಿಸಿದ್ದು, ವಾಣಿಜ್ಯ ತೆರಿಗೆ ಸಂಗ್ರಹ ಗುರಿ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ 13,500 ಕೋಟಿ ರೂ. ಸಂಗ್ರಹದ ನಿರೀಕ್ಷೆಯಿದೆ. ಮೊದಲ ಬಾರಿಗೆ 12,522 ಕೋಟಿ ರೂ. ರಾಜಸ್ವ ಕೊರತೆ ಬಜೆಟ್ ಮಂಡಿಸಿದ್ದು, ಮುಂದಿನ ವರ್ಷದಿಂದ ಉಳಿತಾಯ ಬಜೆಟ್ ಕೊಡುತ್ತೇವೆ ಎಂದರು.



