ಬೆಂಗಳೂರು: ಆಶ್ರಯ ಮನೆ ಸೇರಿ 10 ಲಕ್ಷದೊಳಗೆ ಮನೆ ಕಟ್ಟಿದ್ರೆ ಉಚಿತ ಮರಳು ನೀಡುವ ನೀತಿ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲಿ ಅದನ್ನು ಪ್ರಕಟಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಮಾಹಿತಿ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮರಳು ದಂಧೆ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದರು.ರಾಜ್ಯದಲ್ಲಿ 193 ಮರಳು ನಿಕ್ಷೇಪ ಗುರುತಿಸಿ, 87 ಬ್ಲಾಕ್‌ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಎತ್ತಿನ ಗಾಡಿಯ ಮೂಲಕ ಮರಳು ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೆ, ಮರಳು ಪೂರೈಕೆಗೆ ಸಂಬಂಧಿಸಿದಂತೆ ಪಾಸ್‌ಗಳನ್ನು ವಿತರಿಸಲಾಗಿದೆ. ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿ ನಿಯಮಿತಕ್ಕೆ ಮರಳು ಪೂರೈಕೆಗೆ ಅನುಮತಿಸಲಾಗಿದೆ ಎಂದರು.
ಮರಳು ಪೂರೈಕೆಯಿಂದಾಗಿ ರಾಜ್ಯಕ್ಕೆ ವಾರ್ಷಿಕ 154 ಕೋಟಿ ರೂ. ಆದಾಯ ಬರುತ್ತಿದೆ. ಈ ಎಲ್ಲದರ ನಡುವೆ ಒಂದು ಪಾಸ್ ಪಡೆದು ಹೆಚ್ಚಿನ ಮರಳು ಸಾಗಣೆ, ಮಣ್ಣನ್ನು ಫಿಲ್ಟರ್ ಮಾಡಿ ಮರಳು ಸಾಗಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮರಳಿನ ಕೊರತೆಯಿಲ್ಲ. ಆದರೂ, ಸಣ್ಣ ಪ್ರಮಾಣದ ಮನೆಗಳ ನಿರ್ಮಾಣಕ್ಕೆ ಮರಳಿನ ಅಭಾವವುಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಉಚಿತ ಮರಳು ನೀತಿ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಆಶ್ರಯ ಮನೆ ಸೇರಿ 10 ಲಕ್ಷಕ್ಕಿಂತ ಕಡಿಮೆ ವೆಚ್ಚದ ಮನೆ ನಿರ್ಮಾಣ ಮಾಡುವವರಿಗೆ 100ರಿಂದ 200 ರೂ.ಗೆ 1 ಟನ್ ಮರಳು ಪೂರೈಕೆ ಮಾಡಲಾಗುತ್ತದೆ. ಅದೇ ರೀತಿ ಸರ್ಕಾರಿ ಕಟ್ಟಡಗಳ ನಿರ್ಮಾಣ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ರಾಜಧನ ಪಡೆಯಲಾಗುವುದು. ಜಿಲ್ಲೆ ಮತ್ತು ತಾಲೂಕು ಆಡಳಿತದ ಶೇ. 50 ಸಮಯ ಮರಳು ಪೂರೈಕೆ ಪಾಸ್ ನೀಡುವುದರಲ್ಲಿ ವ್ಯರ್ಥವಾಗುತ್ತಿದೆ. ಅದನ್ನು ತಪ್ಪಿಸುವ ಅಂಶಗಳು ಹೊಸ ನೀತಿಯಲ್ಲಿರಲಿದೆ ಎಂದರು.
ಜೆಡಿಎಸ್‌ನ ಎಚ್.ಡಿ.ರೇವಣ್ಣ, ಫಿಲ್ಟರ್ ಮರಳಿನಿಂದ ಕಟ್ಟಡಗಳ ಗುಣಮಟ್ಟ ಹಾಳಾಗುತ್ತಿದೆ. ಅದನ್ನು ತಡೆಯಲು ಮರಳು ಮತ್ತು ಎಂಸ್ಯಾಂಡ್ ಬಳಕೆ ಹೆಚ್ಚಿಸಬೇಕು. ಅದಕ್ಕಾಗಿ ಕ್ರಷರ್‌ಗಳ ಸರ್ವೇ ಮಾಡಿ, ಅವುಗಳಿಂದ ಎಂ ಸ್ಯಾಂಡ್ ಪಡೆಯಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.